ಇನ್ನು ಐವತ್ತಾರು ದಿನಗಳಲ್ಲಿ ವಿತ್ತಮಂತ್ರಿ ಅರುಣ್ ಜೇಟ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕಾಗಿದೆ. ಅದಲ್ಲಿನ ಒಂದು ಪ್ರಮುಖ ಅಂಶ ಎಂದರೆ ವಿತ್ತೀಯ ಕೊರತೆ, ಒಟ್ಟು ರಾಷ್ಟ್ರೀಯ ಉತ್ಪಾದನೆ ಹಾಗೂ ಸೇವಾ ಸೌಲಭ್ಯಗಳ ಮೌಲ್ಯದ ಶೇ.4.1ರಷ್ಟು ಮೀರಬಾರದು ಎನ್ನುವ ನಿಯಮದ ಪಾಲನೆ.
ಡಿ.31ರೊಳಗೆ ಲಭ್ಯವಿದ್ದ ಚಾಲ್ತಿ ಬಜೆಟ್ ಅಂದಾಜುಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಸರ್ಕಾರ ಈಗಾಗಲೇ ವಿತ್ತೀಯ ಕೊರತೆಯು ಶೇ.99ರಷ್ಟು ನಿಧಿಯನ್ನು ಬಳಸಿದ್ದಾಗಿದೆ. ಇನ್ನು ಮುಂದಿನ ಖರ್ಚಿಗೆ ಹೊಸ ಆದಾಯದ ಮೂಲಗಳನ್ನು ಹುಡುಕಬೇಕು. ಇದು ಅಧಿಕೃತವಾಗಿ ಪ್ರಕಟವಾಗಿರುವ ಅಂಶ.
ಹಾಗೆಂದರೆ ಹೆಚ್ಚು ಕಡಿಮೆ ಎಲ್ಲ ಇಲಾಖೆಗಳಲ್ಲೂ ಖರ್ಚಿಗೆ ದೊಡ್ಡ ರೀತಿಯಲ್ಲೇ ಕತ್ತರಿ ಪ್ರಯೋಗವಾಗಬೇಕು.
ಇಂಥ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ತನ್ನ ಉದ್ಯಮಗಳ ಷೇರುಗಳನ್ನು ಮಾರುವುದು, ಟೆಲಿಕಾಂ ತರಂಗಾಂತರ ಗುಚ್ಛಗಳನ್ನು ಹರಾಜು ಹಾಕುವುದು ಹಾಗೂ ಸರ್ಕಾರಿ ಉದ್ಯಮಗಳಿಂದ ಹೆಚ್ಚು ಡಿವಿಡೆಂಡ್ ನಿರೀಕ್ಷಿಸುವುದು ಅನಿವಾರ್ಯ.
ಇಂಥ ವ್ಯವಸ್ಥೆ ಅಂಕಿ-ಅಂಶಗಳ ಜತೆ ಚೆಲ್ಲಾಟವಾಡುವವರನ್ನು ತೃಪ್ತಿಪಡಿಸಬಹುದು. ಆದರೆ ಆರ್ಥಿಕ ವ್ಯವಸ್ಥೆಯ ಗಂಭೀರ ಅಧ್ಯಯನಕಾರರು ಇದನ್ನು ಒಪ್ಪಲಿಕ್ಕಿಲ್ಲ. ಆದರೆ ಅನಿವಾರ್ಯ. ಚಾಲ್ತಿ ವರ್ಷದ ತೆರಿಗೆ ಆದಾಯ, ಬಜೆಟ್ ನಿರೀಕ್ಷೆಗಿಂತ ಸುಮಾರು ಒಂದು ಲಕ್ಷ ಕೋಟಿ ರುಪಾಯಿಗಳಷ್ಟು ಕಡಿಮೆಯಾಗುತ್ತದೆ.
ಕೇಂದ್ರ ಸರ್ಕಾರದ ಕೆಲವು ಕಂಪನಿಗಳಲ್ಲಿ ಈಗ ಸುಮಾರು ಎರಡು ಲಕ್ಷ ಕೋಟಿ ರುಪಾಯಿ ಕೊಳೆಯುತ್ತಿದೆ. ಆ ಹಣವನ್ನು ಹಾಗೇ ಪಡೆಯಲಿಕ್ಕೆ ಬರುವುದಿಲ್ಲ. ಅಧಿಕ ಡಿವಿಡೆಂಡ್ ಕೇಳಬಹುದು. ಅದು ಈಗಲೂ ಆ ಕಂಪನಿಗಳಲ್ಲಿ ಹಣ ಹೂಡಿರುವ ಖಾಸಗಿ ವ್ಯಕ್ತಿಗಳ, ಸಂಸ್ಥೆಗಳೂ ಲಾಭದಾಯಕ- ಆ ಷೇರುಗಳಲ್ಲೇ ಪೇಟೆಯಲ್ಲಿ ಹೆಚ್ಚು ವ್ಯವಹಾರ ನಡೆಸಬಹುದು.
ಜನಸಾಮಾನ್ಯರಿಗೂ ಎಟಕುವಂಥ ಬ್ಯಾಂಕಿಂಗ್ ವ್ಯವಸ್ಥೆಯ ಹೊಸ ಆವಿಷ್ಕಾರ ಪೇಮೆಂಟ್ ಬ್ಯಾಂಕ್‌ಗಳು. ಈಗ ಆ ಬ್ಯಾಂಕ್‌ಗಳ ಸ್ಥಾಪನೆಗೆ ಲೈಸೆನ್ಸ್ ಸಿಕ್ಕಿದೆ. ಭವಿಷ್ಯದಲ್ಲಿ ಆ ಸಂಸ್ಥೆಗಳನ್ನು ದೊಡ್ಡ ರೀತಿಯಲ್ಲಿ ಬೆಳೆಸುವುದೂ ಸಾಧ್ಯ.
ಹೊಸ ಬ್ಯಾಂಕ್‌ಗಳ(ಪೇಮೆಂಟ್-ಸಣ್ಣ) ಸ್ಥಾಪನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು ಫೆಬ್ರವರಿ 2ರವರೆಗೂ ವಿಸ್ತರಿಸಲಾಗಿದೆ. ಈಗಿನ ಕೆಲವು ದೊಡ್ಡ ಬ್ಯಾಂಕ್‌ಗಳೂ, ಪೇಮೆಂಟ್ ಬ್ಯಾಂಕ್‌ಗಳ ಲೈಸೆನ್ಸ್ ಪಡೆಯುವವರ ಜತೆಯಲ್ಲಿ ಸೇರಿಕೊಳ್ಳಲು ಆಸಕ್ತಿಯನ್ನು ಸೂಚಿಸಿವೆ. ಬ್ಯಾಂಕ್‌ಗಳು-ಟೆಲಿಕಾಮ್ ಕಂಪೆನಿಗಳು ಇಂಥ ಬ್ಯಾಂಕ್‌ಗಳನ್ನು ಚೆನ್ನಾಗಿ ನಿರ್ವಹಿಸಬಲ್ಲವು ಎನ್ನುವ ನಂಬಿಕೆ ಇದೆ.
ಬ್ಯಾಂಕ್‌ಗಳಿಗೆ ಬ್ಯಾಂಕಿಂಗ್ ವ್ಯವಹಾರ ಗೊತ್ತು. ಟೆಲಿಕಾಮ್ ಕಂಪನಿಗಳು ದೇಶದ ಮೂಲೆ ಮೂಲೆಗಳಲ್ಲಿ ಹಬ್ಬಿವೆ. ಇಂಥ ಬ್ಯಾಂಕ್‌ಗಳಲ್ಲಿ ಸಂಗ್ರಹವಾಗುವು ಹಣ ಅಗ್ಗದ ಬಡ್ಡಿ ದರದ ಬಂಡವಾಳವೇ.
ಟೆಲಿಕಾಮ್‌ಗಳಿಗೆ ಹೊಸ ವರ್ಷ
ಫೆಬ್ರವರಿಯಲ್ಲೇ ಸರ್ಕಾರ 2-ಜಿ, 3-ಜಿ(ಎರಡು-ಮೂರನೇ ತಲೆಮಾರುಗಳ) ತರಂಗಾಂತರ ಗುಚ್ಛಗಳನ್ನು ಹರಾಜು ಹಾಕುವುದು ಖಚಿತ. ಈ ಗುಚ್ಛಗಳಿಗೆ ಹರಾಜಿನಲ್ಲಿ ಕೊಂಡುಕೊಳ್ಳಲು ಮುಂದೆ ಬರುವವರು ಅಪಾರವಾದ ಹಣ ಸಂಗ್ರಹ ಮಾಡಲೇಬೇಕು.
ಅಂಥ ಪ್ರಯತ್ನ ಈಗಾಗಲೇ ಅನೇಕ ಕಡೆಗಳಲ್ಲಿ ನಡೆದಿದೆ. ಈ ಕಂಪನಿಗಳು ಹರಾಜಿನಲ್ಲಿ ಹೆಚ್ಚು ಹಣಕ್ಕೆ ಗುತ್ತಿಗೆಯನ್ನು ಪಡೆದರೆ, ಆಗ ಟೆಲಿಫೋನ್ ಸೇವೆಯ ವೆಚ್ಚವೂ ದುಬಾರಿಯಾಗಬಹುದು. ರಿಲೈಯನ್ಸ್, ವೋಡಾಫೋನ್, ಏರ್‌ಟೆಲ್, ಐಡಿಯಾ ಈ ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ಪ್ರಮುಖ ಸಂಸ್ಥೆಗಳು.