ಬೆಂಗಳೂರು: ಭಾರತದ ಎರಡನೇ ಅತೀ ದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ನಾನ್ ಎಕ್ಸಿಕ್ಯುಟೀವ್ ಚೇರ್ಮನ್ ಆಗಿದ್ದ ಕನ್ನಡಿಗ ಕೆವಿ ಕಾಮತ್ ಅವರ ಸ್ಥಾನಕ್ಕೆ ಆರ್ ಶೇಷಸಾಯಿ ಅವರನ್ನು ನೇಮಕ ಮಾಡಲಾಗಿದೆ.
ಕಾಮತ್ ಅವರು ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ತಕ್ಷಣದಿಂದ ಶೇಷಸಾಯಿ ಅವರನ್ನು ನೇಮಕ ಮಾಡಲಾಗಿದೆ.
ಶೇಷಸಾಯಿ ಅವರು 2011ರ ಜನವರಿಯಿಂದ ಸ್ವತಂತ್ರ ನಿರ್ದೇಶಕರಾಗಿ ಹಾಗೂ ಆಡಿಟ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಇಂಡಸ್ಇಂಡ್ ಬ್ಯಾಂಕ್ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಗಮಿತ ನಾನ್ ಎಕ್ಸಿಕ್ಯುಟೀವ್ ಚೇರ್ಮನ್ ಕೆ.ವಿ.ಕಾಮತ್ ಅವರು, ಇನ್ಫೋಸಿಸ್ ಆಡಳಿತ ಮಂಡಳಿಯ ಸದಸ್ಯನಾಗಿ ಹಾಗೂ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ನನ್ನ ಸ್ಥಾನಕ್ಕೆ ಆಡಳಿತ ಮಂಡಳಿ ಉತ್ತಮ ವ್ಯಕ್ತಿಯನ್ನೇ ಆಯ್ಕೆ ಮಾಡಿದೆ ಎಂದಿದ್ದಾರೆ.