ವಾಣಿಜ್ಯ

ವಿಶ್ವ ಆರ್ಥಿಕತೆಯಲ್ಲಿ ಭಾರತಕ್ಕೆ ಉತ್ತಮ ಭವಿಷ್ಯ: ಕ್ರಿಸ್ಟೀನ್ ಲಗಾರ್ಡೆ

Srinivasamurthy VN

ನವದೆಹಲಿ: ಭಾರತಕ್ಕೆ ವಿಶ್ವ ಆರ್ಥಿಕತೆಯಲ್ಲಿ ಉತ್ತಮ ಭವಿಷ್ಯವಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡೆ ಅವರು ಸೋಮವಾರ ಹೇಳಿದ್ದಾರೆ.

2 ದಿನಗಳ ಭಾರತ ಪ್ರವಾಸ ನಿಮಿತ್ತ ಇಂದು ನವದೆಹಲಿಗೆ ಆಗಮಿಸಿದ ಕ್ರಿಸ್ಟೀನ್ ಲಗಾರ್ಡೆ ಅವರನ್ನು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಕ್ರಿಸ್ಟೀನ್ ಲಗಾರ್ಡೆ ಅವರು, 2008-2009ರಿಂದೀಚೆಗೆ ವಿಶ್ವ ಆರ್ಥಿಕತೆ ದುರ್ಬಲವಾಗಿದ್ದು, ಪ್ರತಿ ಹಣಕಾಸಿನ ವರ್ಷದ ಅವಧಿಯಲ್ಲಿ ವಿಶ್ವದ ಆರ್ಥಿಕಾಭಿವೃದ್ಧಿ ಕೇವಲ 3.5ರಷ್ಟು ಮಾತ್ರ ದಾಖಲಾಗುತ್ತಿದೆ. ಮುಂದಿನ ವರ್ಷ 3.7ರಷ್ಟು ಅಭಿವೃದ್ಧಿಯನ್ನು ನಿರೀಕ್ಷಿಸಲಾಗುತ್ತಿದ್ದು, ಈ ಅಭಿವೃದ್ಧಿ ಕೂಡ ಸಾಲದು ಎಂದು  ಲಗಾರ್ಡೆ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಕುಸಿತದ ಆರು ವರ್ಷಗಳ ಬಳಿಕವೂ ವಿಶ್ವ ಆರ್ಥಿಕತೆಯಲ್ಲಿ ಗಮನಾರ್ಹ ಅಭಿವೃದ್ಧಿಯಾಗಿಲ್ಲ, ಆರ್ಥಿಕ ಚೇತರಿಕೆ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ. ಕಳೆದ ಅಕ್ಟೋಬರ್ ನಿಂದ ನಾವು ವಿಶ್ವ ಆರ್ಥಿಕತೆಯನ್ನು ಗಮನಿಸುತ್ತಿದ್ದು, ಇಂಧನ ದರ ಇಳಿಕೆ ಮತ್ತು ಅಮೆರಿಕದ ಬಲಾಢ್ಯ ಆರ್ಥಿಕತೆ ಕೊಂಚ ಸಮಾಧಾನ ತಂದಿದೆಯಾದರೂ ಇದು ನಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲ. ಆದರೆ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಭಾರತದ ಆರ್ಥಿಕ ವಲಯದಲ್ಲಿ  ಉತ್ತಮ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿದ್ದು, ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದು ಲಗಾರ್ಡೆ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ್ದ ವರದಿಯಲ್ಲಿ 2016ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಚೀನಾವನ್ನು ಹಿಂದಿಕ್ಕಲಿದೆ ಎಂದು ಹೇಳಿತ್ತು. ಇದಕ್ಕೆ ಗರಂ ಆಗಿದ್ದ ಚೀನಾ ಇದಕ್ಕೆ ಸಾಕ್ಷಿ ಏನು ಎಂದು ಕೇಳಿತ್ತು.

SCROLL FOR NEXT