ಮುಂಬೈ: 479 ಅಂಕಗಳ ಮಹತ್ವದ ಏರಿಕೆಯೊಂದಿಗೆ ಭಾರತೀಯ ಷೇರುಮಾರುಕಟ್ಟೆ ಮುಕ್ತಾಯಗೊಂಡಿದೆ.
ಭಾರತೀಯ ಷೇರುಮಾರುಕಟ್ಟೆಯಲ್ಲಿ ಸೋಮವಾರ ಚೇತೋಹಾರಿ ವಹಿವಾಟು ಕಂಡುಬಂದಿದ್ದು, ಸೆನ್ಸೆಕ್ಸ್ 479 ಅಂಕಗಳ ಏರಿಕೆಯೊಂದಿಗೆ 27, 491 ಅಂಕಗಳಿಗೇರಿದೆ. ನಿಫ್ಟಿ ಕೂಡ 150.50 ಅಂಕಗಳ ಏರಿಕೆಯೊಂದಿಗೆ 8, 331.95 ಅಂಕಗಳಿಗೇರಿದೆ.
ಸೋಮವಾರ ಭಾರತೀಯ ಷೇರುಗಳಿಗೆ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಖರೀದಿಗೆ ಮುಂದಾದರು. ಪರಿಣಾಮ ಅಂತಿಮ ಅರ್ಧಗಂಟೆಯ ವಹಿವಾಟಿನ ವೇಳೆ ಹೂಡಿಕೆದಾರರು ಒತ್ತಡದ ಖರೀದಿಗೆ ಮುಂದಾದರು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಇನ್ನು ಭಾರತೀಯ ತೈಲೋತ್ಪನ್ನಗಳ ಸಂಸ್ಥೆ (Oil and Natural Gas Corporation Limited) ONGC ಸಂಸ್ಥೆ ಹೆಚ್ಚಿನ ಲಾಭಾಂಶ ಪಡೆದುಕೊಂಡಿದೆ.
ONGC ಸಂಸ್ಥೆಯ ಷೇರುಗಳ ಬೆಲೆಯಲ್ಲಿ ಶೇ.8ರಷ್ಟು ಏರಿಕೆ ಕಂಡುಬಂದಿದೆ. ಎರಡನೇ ಸ್ಥಾನದಲ್ಲಿ ಬಜಾಜ್ ಆಟೋ ಇದ್ದು, ಈ ಸಂಸ್ಥೆಯ ಷೇರುಗಳ ಮೌಲ್ಯ ಶೇ.7.6ರಷ್ಟು ಏರಿಕೆಯಾಗಿದೆ. ಉಳಿದಂತೆ ಸಿಪ್ಲಾ ಸಂಸ್ಥೆ ಶೇ.5.8, ಎಂ ಅಂಡ್ ಎಂ ಸಂಸ್ಥೆ ಶೇ.4.9, ಬಿಹೆಚ್ ಇಎಲ್ ಸಂಸ್ಥೆಯ ಷೇರುಗಳ ಮೌಲ್ಯ ಶೇ.3.9 ರಷ್ಟು ಏರಿಕೆಯಾಗಿದೆ.