ನವದೆಹಲಿ: 2014-15ನೇ ಹಣಕಾಸಿನ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಪ್ರಮಾಣ ಶೇ.7.3ರಷ್ಟು ಏರಿಕೆಯಾಗಿದೆ.
ಕೇಂದ್ರ ಸಾಂಖ್ಯಿಕ ಇಲಾಖೆ (ಸಿಎಸ್ಒ) ವರದಿಯ ಪ್ರಕಾರ ಜಿಡಿಪಿ ಏರಿಕೆಯು ಈ ವರ್ಷದಲ್ಲೇ ಅತ್ಯಂತ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 6.7ರಷ್ಟಿದ್ದರೆ, ಎರಡನೇ ತ್ರೈಮಾಸಿಕದಲ್ಲಿ 8.4ರಷ್ಟು ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇ.6.5ರಷ್ಟು ಏರಿಕೆಯಾಗಿತ್ತು. ಇದೀಗ ನಾಲ್ಕನೇ ತ್ರೈಮಾಸಿಕದಲ್ಲಿಯೂ ಮತ್ತೆ ಜಿಡಿಪಿ ಏರಿಕೆ ದಾಖಲಿಸಿ, ನಿರೀಕ್ಷಿತ ದಾಖಲೆ ಮುಟ್ಟಿದೆ. ಆ ಮೂಲಕ ಜಿಡಿಪಿ ನೈಜ ದೃಢತೆ ಕಾಯ್ದುಕೊಂಡಿದ್ದು, 2014-15ರಲ್ಲಿ 106.57 ಲಕ್ಷ ಕೋಟಿ ರೂ. ದಾಖಲಿಸಿದೆ.
ಮೊದಲ ಪರಿಷ್ಕೃತ ಅಂದಾಜಿನ ಜಿಡಿಪಿ ಶೇ.7.3ರಷ್ಟು ಏರಿಕೆ ಕಾಯ್ದುಕೊಂಡಿದೆ ಎಂದು ಸಿಎಸ್ಒ ಇಲಾಖೆ ತಿಳಿಸಿದೆ. 2014-15ರಲ್ಲಿ ಅಂದಾಜಿಸಿದಂತೆ 87,748 ರೂ.ಗೆ ಏರಿಕೆಯಾಗಿದ್ದು, ಶೇ.9.2ರಷ್ಟು ಏರಿಕೆ ಕಂಡುಬಂದಿದೆ. ಇದರ ಬೆನ್ನಲ್ಲೇ ಮುಂದಿನ ವಾರದ ವೇಳೆ ಸರ್ಕಾರ ಕೂಡ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಯಿದೆ.
ಇನ್ನು ಜಿಡಿಪಿ ದರ ಏರಿಕೆ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣುತ್ತಿದೆ ಎಂದು ಸ್ವಷ್ಟವಾಗಿ ಹೇಳಬಹುದು. ಇದರ ಹೊರತಾಗಿಯೂ ಸಣ್ಣ ಪ್ರಮಾಣದಲ್ಲಿ ಹಣದುಬ್ಬರವಿದೆ ಎಂದು ಹೇಳಿದ್ದಾರೆ.