ನವದೆಹಲಿ: ಇನ್ಮುಂದೆ ರೇಲ್ವೇ ಟಿಕೆಟ್ ಖರೀದಿಸಿ ಅದನ್ನು ಪ್ರಯಾಣಕ್ಕೆ ಹತ್ತಿರದ ದಿನ ಅಥವಾ ಪ್ರಯಾಣಕ್ಕಿಂತ ತುಸು ಮುನ್ನ ರದ್ದು ಮಾಡಿದರೆ ಪ್ರಯಾಣಿಕ ದುಪಟ್ಟು ಹಣ ಪಾವತಿಸಬೇಕಾಗಿ ಬರುತ್ತದೆ ಎಂಬ ಸುದ್ದಿ ಕೇಳಿ ಬಂದಿದೆ.
ಭಾರತೀಯ ರೇಲ್ವೆ ಈಗ ಹೊಸ ನಿಯಮಗಳನ್ನು ಅನುಷ್ಠಾನ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ನಿಯಮಗಳಲ್ಲಿ, ಯಾವುದೇ ವಿಭಾಗದಲ್ಲಾಗಲೀ ಪ್ರಯಾಣಿಕರು ಟಿಕೆಟ್ ರದ್ದು ಮಾಡಿದರೆ ಟಿಕೆಟ್‌ನ ದುಪಟ್ಟು ಹಣವನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ ರೈಲು ಹೋದ ನಂತರ ಯಾವುದೇ ಟಿಕೆಟ್ ರದ್ದು ಮಾಡಲು ಸಾಧ್ಯವಾಗುವುದಿಲ್ಲ. ಈ ಹೊಸ ನಿಯಮ ನವೆಂಬರ್ 12 ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಸುದ್ದಿಮೂಲಗಳು ಹೇಳಿವೆ.
ಟಿಕೆಟ್‌ಗಾಗಿ ಕಾಯುವಿಕೆ ಪಟ್ಟಿಯಲ್ಲಿದ್ದವರು ಅಥವಾ ಆರ್‌ಎಸಿ ಟಿಕೆಟ್ ಹೊಂದಿದವರು ರೈಲು ಹೊರಡುವ ಅರ್ಧ ಗಂಟೆಯ ಮುಂಚೆ ಟಿಕೆಟ್ ರದ್ದು ಮಾಡಿದರೆ ಮಾತ್ರ ದುಡ್ಡು ವಾಪಸ್ ಸಿಗುತ್ತದೆ. ಅರ್ಧ ಗಂಟೆಗೆ ಮುಂಚಿತ ಮಾಡದೇ ಇದ್ದರೆ ದುಡ್ಡು ವಾಪಸ್ ಮಾಡಲಾಗುವುದಿಲ್ಲ.
ಆದಾಗ್ಯೂ, ಇನ್ನು ಮುಂದೆ ರೈಲಿನಲ್ಲಿ 48 ಗಂಟೆಗಳ ರದ್ದು ನಿಯಮವನ್ನು ತರಲಾಗುತ್ತಿದೆ. ಇದರ ಪ್ರಕಾರ ಎಸಿ ಫಸ್ಟ್ ಕ್ಲಾಸ್/ ಎಕ್ಸಿಕ್ಯೂಟಿವ್ ಕ್ಲಾಸ್ ಟಿಕೆಟ್ ಆಗಿದ್ದರೆ ಟಿಕೆಟ್ ಹಣದ್ದಿಂದ ರು. 240 ಕಳೆಯಲಾಗುವುದು. ಅದೇ ವೇಳೆ ಎಸಿ 2 ಟೈರ್/ ಫಸ್ಟ್ ಕ್ಲಾಸ್ ಆಗಿದ್ದರೆ ರು. 200, ಎಸಿ 3 ಟೈರ್ ಆಗಿದ್ದರೆ ರು. 180, ಸ್ಲೀಪರ್ ಕ್ಲಾಸ್ ಆಗಿದ್ದರೆ 120 ಮತ್ತು ಸೆಕೆಂಡ್ ಕ್ಲಾಸ್ ಆಗಿದ್ದರೆ ರು. 60 ನ್ನು ಟಿಕೆಟ್ ಹಣದಿಂದ ಕಳೆಯಲಾಗುವುದು.