ಮುಂಬೈ: ಆರ್ಥಿಕತೆಯನ್ನು ವೇಗವಾಗಿ ಮುನ್ ನಡೆಸಬೇಕೆಂದು ಮುಂದಾದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಎಚ್ಚರಿಸಿದ್ದಾರೆ.
ಬ್ರೆಜಿಲ್‍ನ್ನು ಉದಾಹರಣೆ ನೀಡಿರುವ ಅವರು, ಇತ್ತೀಚೆಗಷ್ಟೆ ಅತಿವೇಗದ ಬೆಳವಣಿಗೆ ಕಂಡಿದ್ದ ದೇಶ ಇಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ರೇಟಿಂಗ್ ಸಂಸ್ಥೆ ಎಸ್ ಅಂಡ್ ಪಿ ಬ್ರೆಜಿಲ್‍ಗೆ ಕಳಪೆ ದರ್ಜೆ ನೀಡಿದೆ ಎಂದು ತಿಳಿಸಿದ್ದಾರೆ. ನಾಲ್ಕನೆ ಸಿ.ಕೆ.ಪ್ರಹ್ಲಾದ್ ಸ್ಮರಣಾರ್ಥ ಉಪನ್ಯಾಸ ನೀಡಿದ ಅವರು, ಭಾರಿ ಪ್ರಶಂಸೆಗೆ ಪಾತ್ರವಾಗಿದ್ದ ಬ್ರೆಜಿಲ್‍ನ ಆರ್ಥಿಕ ಪ್ರಗತಿ ಈಗ ಅಪಾರ ಪ್ರಮಾಣ ಸಾಲ, ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕಂಪನಿಗಳು ವಸೂಲಾಗದ ಸಾಲದಿಂದ ಮುಳುಗಿವೆ ಎಂದು ಎಚ್ಚರಿಸಿದ್ದಾರೆ.
ಅಂತಹ ಆರ್ಥಿಕ ಪ್ರಗತಿ ಕೂಡದು ಎಂದಿರುವ ಅವರು, ಅಭಿವೃದ್ಧಿ ಯಾವಾ ಗಲೂ ಸರಿಯಾದ ಹಾದಿಯಲ್ಲಿರಬೇಕು. ಆರ್ಥಿಕ ಉತ್ತೇಜನ ಪ್ಯಾಕೇಜ್‍ಗಳನ್ನು ನೀಡಿದರೆ ತಾತ್ಕಾಲಿಕವಾಗಿ ಪ್ರಗತಿ ಕಾಣಲಿದೆ. ಇದೇ ಸಂದರ್ಭದಲ್ಲಿ ಅತಿ ಹೆಚ್ಚಿನ ಹಣದುಬ್ಬರ ಮತ್ತು ಕೊರತೆ ಹೆಚ್ಚಲಿದೆ ಎಂದಿದ್ದಾರೆ. ಉತ್ತಮ ಸ್ಥಿತಿಯಲ್ಲಿ ಆರ್ಥಿಕತೆ: ದೇಶದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಮಹಾಸಾಗರದಲ್ಲಿ ಅಲ್ಲೋಲ ಕಲ್ಲವಾದರೂ ನಮ್ಮ ದ್ವೀಪ ಶಾಂತವಾಗಿದೆ ಎಂದು ದೇಶದ ಆರ್ಥಿಕತೆಯನ್ನು ಬಣ್ಣಿಸಿದ್ದಾರೆ. ಬ್ರಿಕ್ಸ್ ದೇಶಗಳಾದ ಬ್ರೆಜಿಲ್, ಚೀನಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ. ಇದಕ್ಕೆ ಹೋಲಿಸಿದರೆ ಭಾರತದ ಪರಿಸ್ಥಿತಿ ಉತ್ತಮ ಎಂದಿದ್ದಾರೆ.
ಆಧಾರ್‍ಗೆ ಬೆಂಬಲ
ಆಧಾರ್ ಯೋಜನೆ ಪರ ಬ್ಯಾಟಿಂಗ್ ಮಾಡಿರುವ ಆರ್‍ಬಿಐ ಗೌರ್ನರ್ ರಘುರಾಂ ರಾಜನ್, ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಹೆಚ್ಚು ಸ್ಪಷ್ಟೀಕರಣ ಅಗತ್ಯವಿದೆ. ಆಧಾರ್ ಕಾರ್ಡ್ ಬಳಕೆಯಿಂದ ಸೌಲಭ್ಯ ಅರ್ಹ ವ್ಯಕ್ತಿಗೆ ತಲುಪಿ ಸೋರಿಕೆ ತಪ್ಪಲಿದೆ ಎಂದಿದ್ದಾರೆ.