ವಾಣಿಜ್ಯ

7 ಸ್ಟಾರ್ಟ್‍ಅಪ್ ಒಪ್ಪಂದ: ಪ್ರಧಾನಿ ಸಮ್ಮುಖದಲ್ಲಿ ಕಂಪನಿಗಳು ಸಹಿ

Mainashree

ಸ್ಯಾನೋಸೆ: ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿರುವುದು ಭಾರತದಲ್ಲಿ ಸ್ಟಾರ್ಟ್‍ಅಪ್ ವಹಿವಾಟಿಗೂ ಹೊಸ ಸ್ಫೂರ್ತಿ ತುಂಬಿದೆ. ಭಾರತದಲ್ಲಿ ಹೊಸದಾಗಿ ಕಂಪನಿಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಕಂಪನಿಗಳು ಏಳು ಒಪ್ಪಂದಗಳಿಗೆ ಸಹಿ ಮಾಡಿದವು.

ಇಂಡಿಯಾ-ಯುಎಸ್ ಸ್ಟಾರ್ಟ್ ಅಪ್ ಕನೆಕ್ಟ್-2015 ಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದಾಗ ಈ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಸೆಂಟರ್ ಫಾರ್ ಸೆಲ್ಯೂಲರ್ ಅಂಡ್ ಮಾಲಿಕುಲರ್ ಪ್ಲಾಟ್ಫಾರ್ಮ್ಸ್ ಮತ್ತು ಕ್ಯಾಲಿಫೋರ್ನಿಯಾ ಇನ್ಸ್‍ಟ್ಯೂಟ್ ಫಾರ್ ಕ್ವಾಂಟಿಟೇಟಿವ್ ಬೈಯೋಸೈನ್ಸಸ್ ಮೊದಲ ಒಪ್ಪಂದಕ್ಕೆ ಸಹಿ ಮಾಡಿದವು. ಈ ಎರಡೂ ಕಂಪನಿಗಳು ಇಂಡೊ- ಯುಎಸ್ ಲೈಫ್ ಸೈನ್ಸ್ ಇನ್ನೋವೇಷನ್ ಕೇಂದ್ರ ಸ್ಥಾಪಿಸಲಿವೆ.

ಇದರಡಿ ಎರಡೂ ಕಂಪನಿಗಳು ತಮ್ಮಲ್ಲಿನ ತಂತ್ರಜ್ಞಾನ ಬಳಸಿಕೊಂಡು ವಿಜ್ಞಾನ ಆಧರಿತ ಉದ್ಯಮಶೀಲತೆ, ಸಂಶೋಧನೆ, ಅಕಾಡೆಮಿಕ್ ಮತ್ತು ಬಿಸಿನೆಸ್ ಅಭಿವೃದ್ಧಿಪಡಿಸಲಿವೆ. ಜೈವಿಕ ತಂತ್ರಜ್ಞಾನ ಇಲಾಖೆ, ಪ್ರಕಾಶ್ ಲ್ಯಾಬ್ ಮತ್ತು ಸ್ಟಾನ್ಫೋರ್ಡ್ ವಿವಿ ಎರಡನೇ ಒಪ್ಪಂದಕ್ಕೆ ಸಹಿ ಮಾಡಿದವು. ಈ ಲ್ಯಾಬ್ ತನ್ನ ಉತ್ಪನ್ನಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಲಿದೆ.

ನಾಸ್ಕಾಂ ಮತ್ತು ಇಂಡಸ್ ಎಂಟರ್ ಪ್ರೈಸಸ್ ಒಡಂಬಡಿಕೆಗೆ ಸಹಿ ಮಾಡಿವೆ. ಈ ಕಂಪನಿಗಳು ಭಾರತ ಮತ್ತು ಸಿಲಿಕಾನ್ ವ್ಯಾಲಿಯಲ್ಲಿ ತಂತ್ರಜ್ಞಾನ ಆಧರಿತ ಉದ್ಯಮಶೀಲತೆ ಬೆಳೆಸಲು ಅಗತ್ಯವಾದ ಪರಿಸರ ನಿರ್ಮಿಸಲು ಈ ಎರಡೂ ಕಂಪನಿಗಳು ಐಐಎಂ ಅಹಮದಾಬಾದ್ ನ ಸೆಂಟರ್ ಫಾರ್ ಇನ್ನೋವೇಷನ್ ಅಂಡ್ ಎಂಟರ್‍ಪ್ಯೂನರ್‍ಶಿಪ್ (ಸಿಐಐಇ) ಮತ್ತು ಕ್ಯಾಲಿಫೋರ್ನಿಯಾದ ಹಾಸ್ ಬಿಸಿನೆಸ್ ಸ್ಕೂಲ್‍ನ ಸೆಂಟರ್ ಫಾರ್ ಎಂಟರ್‍ಪ್ಯೂನರ್‍ಶಿಪ್ ನಡುವೆ ಒಪ್ಪಂದ ಏರ್ಪಟ್ಟಿದೆ.

ಈ ಎರಡೂ ಸಂಸ್ಥೆಗಳು ತಮ್ಮ ನಡುವಿನ ಚಟುವಟಿಕೆಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಿವೆ. ಲಾಸ್ ಎಂಜಲ್ಸ್ ಕ್ಲೀನ್‍ಟೆಕ್ ಇನ್‍ಕ್ಯುಬೇಟರ್ (ಎಲ್‍ಎಸಿಐ) ಸಂಸ್ಥೆ ಜೊತೆಗೆ ಸಿಐಐಇ ಒಪ್ಪಂದ ಮಾಡಿಕೊಂಡಿದೆ. ಸಿಐಐಇ ಟಾಟಾ ಟ್ರಸ್ಟ್ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದೆ. ಭಾರತ್ ಫಂಡ್‍ಗೆ ಸಂಸ್ಥಾಪನಾ ಪಾಲುದಾರ ಸಂಸ್ಥೆಯಾಗಿದೆ. ಇದರ ಅಡಿಯಲ್ಲಿ ಭಾರತದ ಉದ್ಯಮಿಗಳಿಗೆ ಆರಂಭಿಕ ಹಣಕಾಸು ನೆರವು ನೀಡಲಾಗುವುದು. ಸಿಐಐಇ ಗೂಗಲ್ ಜೊತೆಗೂ ಒಪ್ಪಂದ ಮಾಡಿಕೊಂಡಿದ್ದು ಉದ್ಯಮಿಗಳಿಗೆ ಅಗತ್ಯವಾದ ತಂತ್ರಜ್ಞಾನ ನೆರವು ಒದಗಿಸಲಿದೆ.

ಆಕ್ಸೆಂಚರ್ ಸಂಶೋಧನಾ ಕೇಂದ್ರ ಭಾರತಕ್ಕೆ: ವಿಶ್ವದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಆಕ್ಸೆಂಚರ್ ತನ್ನ ಸ್ಟಾರ್ಟ್ ಅಪ್ ಇನೋವೇಷನ್ ಪರಿಕಲ್ಪನೆಯನ್ನು ಭಾರತಕ್ಕೆ ವಗಾಯಿಸುವತ್ತ ನೋಟ ಹರಿಸಿದೆ. ಇದರೊಂದಿಗೆ ಕಂಪನಿ ಭಾರತದ ಕಂಪನಿಗಳ ಜೊತೆಗೆ ಕಾರ್ಯ ನಿರ್ವಹಿಸಲು ಮುಂದಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಲ್ಲಿ ಸ್ಟಾರ್ಟ್‍ಅಪ್ ಸ್ಥಾಪಿಸುವ ಸಾಧ್ಯತೆ ಹೆಚ್ಚಾಗಿದೆ. ಭಾರತದ ಕಂಪನಿಗಳೊಂದಿಗೆ ಸಹಯೋಗಮಾಡಿಕೊಳ್ಳುವುದು ಈಗಾಗಲೆ ಕೈಗೊಳ್ಳಲಾಗಿದೆ ಎಂದು ಗ್ರೂಪ್‍ನ ಮಾರ್ಕೆಟಿಂಗ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಯಾನ್ ಫ್ರಾಂಕೊ ಕಸಾಟಿ ಹೇಳಿದ್ದಾರೆ.

SCROLL FOR NEXT