

ಇಸ್ಲಾಮಾಬಾದ್: ತಾಲಿಬಾನ್ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಶುಕ್ರವಾರ ಘೋಷಿಸಿದ್ದಾರೆ.
ಶುಕ್ರವಾರ (ಇಂದು) ಬೆಳ್ಳಂಬೆಳಗ್ಗೆ ಕಾನೂಲ್ ಮತ್ತು ಇತರ 2 ಅಫ್ಘಾನ್ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ಪಾಕ್ ಸೈನಿಕರನ್ನು ಹತ್ಯೆಗೈದ ಬಳಿಕ ಈ ದಾಳಿ ಸಂಭವಿಸಿರುವುದಾಗಿ ಅಫ್ಘಾನಿಸ್ತಾನದ ಸರ್ಕಾರಿ ವಕ್ತಾರರು ಹೇಳಿಕೊಂಡಿದ್ದಾರೆ.
ಅಫ್ಗಾನಿಸ್ತಾನ ಪಡೆಗಳು ಪಾಕಿಸ್ತಾನ ಗಡಿಯತ್ತ ಗುರುವಾರ ರಾತ್ರಿ ದಾಳಿ ನಡೆಸಿದ್ದವು. ಪಾಕಿಸ್ತಾನ ಸೇನೆಯು ಈ ಹಿಂದೆ ನಡೆಸಿದ್ದ ವಾಯುದಾಳಿಗಳಿಗೆ ಪ್ರತೀಕಾರವಾಗಿ ದಾಳಿ ಮಾಡಿರುವುದಾಗಿ ತಾಲಿಬಾನ್ ಸರ್ಕಾರ ಪ್ರತಿಪಾದಿಸಿತ್ತು.
ಶುಕ್ರವಾರ ಪಾಕಿಸ್ತಾನ ಅಫ್ಘಾನಿಸ್ತಾನದ ಕಾಬೂಲ್ ಮತ್ತು ಕಂದಹಾರ್ ಮೇಲೆ ಬಾಂಬ್ ದಾಳಿ ಮಾಡಿದ ನಂತರ ಉದ್ವಿಗ್ನತೆ ಹೆಚ್ಚಿದೆ. ಈ ವಾರದ ಆರಂಭದಲ್ಲಿ ನಡೆದ ಮಾರಕ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಪಾಕಿಸ್ತಾನಿ ಗಡಿ ಪಡೆಗಳ ಮೇಲೆ ದಾಳಿ ಮಾಡಿದ ಹಲವು ಗಂಟೆಗಳ ನಂತರ ಈ ಘರ್ಷಣೆ ಸಂಭವಿಸಿದೆ.
"ನಮ್ಮ ತಾಳ್ಮೆಯ ಮಿತಿಯನ್ನು ತಲುಪಿದೆ. ಈಗ ನಮ್ಮ ಮತ್ತು ನಿಮ್ಮ ನಡುವಿನ ಮುಕ್ತ ಯುದ್ಧ" ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘಾನಿಸ್ತಾನದ ವಿರುದ್ಧ 'ಘಜಾಬ್ ಲಿಲ್ ಹಕ್' ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾಗಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಿಂಸಾಚಾರ ಉಲ್ಬಣಗೊಳ್ಳುತ್ತಿದ್ದಂತೆ, ಎರಡೂ ಮಿಲಿಟರಿಗಳು ಇನ್ನೊಂದು ಬದಿಯಲ್ಲಿ ಡಜನ್ಗಟ್ಟಲೆ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿವೆ.
ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದೆ. ಕಾಬೂಲ್ , ಕಂದಹಾರ್ ಮತ್ತು ಪಕ್ತಿಯಾ ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಆದ್ರೆ ದಾಳಿಯಲ್ಲಿ ಸಂಭಾವ್ಯ ಸಾವು ನೋವುಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ನಡೆದ ಸಂಘರ್ಷಗಳಲ್ಲಿ ಎದುರಾಳಿ ಪಡೆಯ ಸಾಕಷ್ಟು ಯೋಧರನ್ನು ಹತ್ಯೆ ಮಾಡಿರುವುದಾಗಿ ಎರಡೂ ರಾಷ್ಟ್ರಗಳ ಸೇನೆಗಳು ಹೇಳಿಕೊಂಡಿವೆ.
ಪಾಕಿಸ್ತಾನದಲ್ಲಿ ದಾಳಿ ಸಂಘಟಿಸುತ್ತಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಅಫ್ಗಾನಿಸ್ತಾನ ವಿಫಲವಾಗಿದೆ ಎಂದು ಇಸ್ಲಾಮಾಬಾದ್ ಆರೋಪಿಸುತ್ತಿದೆ. ಆದರೆ, ಆ ಆರೋಪಗಳನ್ನು ತಾಲಿಬಾನ್ ಸರ್ಕಾರ ನಿರಾಕರಿಸುತ್ತಾ ಬಂದಿದೆ. ಕತಾರ್, ಟರ್ಕಿ ನೇತೃತ್ವದಲ್ಲಿ ಅಫ್ಗಾನ್ ಮತ್ತು ಪಾಕ್ ನಡುವಣ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿತ್ತು. ಅದರ ಮುಂದುವರಿದ ಭಾಗವಾಗಿ ಶಾಶ್ವತ ಒಪ್ಪಂದ ರೂಪಿಸುವ ಸಂಬಂಧ ಹಲವು ಸುತ್ತು ಮಾತುಕತೆ ನಡೆದಿದ್ದರೂ ಫಲಪ್ರದವಾಗಿಲ್ಲ.
ವಿವಾದಿತ ಡುರಾಂಡ್ ರೇಖೆಯ ಉದ್ದಕ್ಕೂ ಮಿಲಿಟರಿ ನೆಲೆಗಳು ಮತ್ತು ಔಟ್‌ಪೋಸ್ಟ್‌ಗಳನ್ನ ತನ್ನ ಪಡೆಗಳು ವಶಪಡಿಸಿಕೊಂಡಿವೆ ಎಂದು ತಾಲಿಬಾನ್ ಹೇಳಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ವಾಯುದಾಳಿ ನಡೆಸಿದೆ. ಈ ಬೆನ್ನಲ್ಲೇ ಡುರಾಂಡ್ ರೇಖೆ ಎಂದು ಕರೆಯಲ್ಪಡುವ 2,611 ಕೀಮೀ ಉದ್ದದ ಗಡಿ ಹಾಗೂ ಗಡಿಯ ಇನ್ನೊಂದು ಭಾಗವಾದ ಟೋರ್ಖಾಮ್‌ನಲ್ಲಿಯೂ ಉಭಯ ದೇಶಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಜೊತೆಗೆ ಪಾಕಿಸ್ತಾನ ಸೇನೆ ಗಡಿ ಗ್ರಾಮಗಳನ್ನ ಖಾಲಿ ಮಾಡಿಸಿದೆ.
Advertisement