ವಿಶ್ವ ಪ್ರಸಿದ್ಧ ಐಟಿ ಸಂಸ್ಥೆ ಯಾಹೂ ನ್ನು ಖರೀದಿಸಲು ಡೈಲಿ ಮೇಲ್ ಅಂಡ್ ಜನರಲ್ ಟ್ರಸ್ಟ್ ಸಂಸ್ಥೆ ಖರೀದಿಸಲು ಮುಂದಾಗಿದೆ.
38 ಬಿಲಿಯನ್ ಡಾಲರ್ ಗಳಷ್ಟು ಮಾರುಕಟ್ಟೆ ಮೌಲ್ಯ ಹೊಂದಿರುವ ಯಾಹೂ ಸಂಸ್ಥೆ, ಗೂಗಲ್ ಹಾಗೂ ಫೇಸ್ ಬುಕ್ ಪ್ರಾರಂಭವಾದ ನಂತರ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದ್ದು ಸವಾಲನ್ನು ಎದುರಿಸುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ವೆಬ್ ಉದ್ಯಮವನ್ನು ಮಾರಾಟಕ್ಕೆ ಇಟ್ಟಿತ್ತು, ಇದಕ್ಕಾಗಿ ಏ.18 ಕ್ಕೆ ಡೆಡ್ ಲೈನ್ ಸಹ ನೀಡಿದ್ದು ಡೈಲಿ ಮೇಲ್ ಅಂಡ್ ಜನರಲ್ ಟ್ರಸ್ಟ್ ಸಂಸ್ಥೆ ಯಾಹೂ ಸಂಸ್ಥೆಯನ್ನು ಖರೀದಿಸಲು ಆಸಕ್ತಿ ತೋರಿದೆ.
ಪ್ರಸ್ತುತ ಯಾಹೂ ನ್ಯೂಸ್ ವಿಭಾಗದ ಮೇಲೆ ಡೈಲಿ ಮೇಲ್ ಕಣ್ಣಿಟ್ಟಿದ್ದು ಯಾಹೂ ಪಾಲುದಾರಿಕೆಯ ಸಂಸ್ಥೆಗಳು ವೆಬ್ ಉದ್ಯಮವನ್ನು ಖರೀದಿಸುವ ಸಾಧ್ಯತೆ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿದೆ. ಮತ್ತೊಂದು ಯೋಜನೆ ಪ್ರಕಾರ 2012 ರಲ್ಲಿ ಪ್ರಾರಂಭವಾಗಿದ್ದ ಡೈಲಿ ಮೇಲ್ ನ ಯುಎಸ್ ವೆಬ್ ಸೈಟ್ ನ್ನು ಯಾಹೂ ಮೀಡಿಯಾ ಹಾಗೂ ನ್ಯೂಸ್ ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಇನ್ನು ಟೈಮ್ ಐಎನ್ ಸಿ ಸಹ ಖಾಸಗಿ ಷೇರುಗಳ ಸಹಯೋಗದಲ್ಲಿ ಯಾಹೂ ಸಂಸ್ಥೆಯ ವೆಬ್ ಉದ್ಯಮವನ್ನು ಖರೀದಿಯ ಪ್ರಸ್ತಾವನೆಯನ್ನು ಪರಿಗಣಿಸಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಯುಎಸ್ ನ ಟೆಲಿಕಾಂ ಸೇವೆ ಪೂರೈಕೆದಾರ ಸಂಸ್ಥೆ ವೆರಿಝೋನ್ ಸಹ ಯಾಹೂ ವೆಬ್ ಉದ್ಯಮದ ಮೇಲೆ ಹಾಗೂ ಯಾಹೂ ಸಂಸ್ಥೆಯ ಜಪಾನ್ ವೆಬ್ ಸೈಟ್ ಖರೀದಿಸಲು ಉತ್ಸುಕವಾಗಿದೆಯಂತೆ.
ತದ್ವಿರುದ್ಧವಾಗಿ ಯಾಹೂ ಸಂಸ್ಥೆ ತನ್ನ ಉದ್ಯಮವನ್ನು ಉಳಿಸಿಕೊಳ್ಳಬೇಕು ಎಂದು ಸಂಸ್ಥೆಯ ಷೇರುದಾರರು ಒತ್ತಡ ಹೇರುತ್ತಿದ್ದಾರೆ. ಫೆಬ್ರವರಿಯಲ್ಲಿ ಯಾಹೂ ಸಂಸ್ಥೆ 1 ,600 ಉದ್ಯೋಗಗಳನ್ನು ಕಡಿತಗೊಳಿಸಿತ್ತು. ಅಮೆರಿಕಾದಲ್ಲಿ ನೆಲೆ ಕಂಡುಕೊಳ್ಳಲು ಡೈಲಿ ಮೇಲ್ ನ ಮೇಲ್ ಆನ್ ಲೈನ್ ಪರದಾಡುತ್ತಿದೆ, ಆದರೆ ಯಾಹೂ ಯಶಸ್ವಿಯಾಗಿ ನೆಲೆಕಂಡುಕೊಂಡಿದ್ದು ಡೈಲಿ ಮೇಲ್ ಅಮೆರಿಕಾದಲ್ಲಿ ನೆಲೆಯೂರಲು ಯಾಹೂ ಸಂಸ್ಥೆಯೊಂದಿಗೆ ಕೈಜೋಡಿಸುವ ಇರಾದೆ ಹೊಂದಿದೆ.