ಸ್ಯಾನ್ ಫ್ರ್ಯಾನ್ಸಿಸ್ಕೋ: ಇದೇ ಮೊದಲ ಬಾರಿಗೆ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ನ ಮಾರಾಟ ಮತ್ತು ಆದಾಯ ಕುಸಿದಿದ್ದು, ಮುಂಬರುವ ತ್ರೈಮಾಸಿಕದಲ್ಲೂ ಸಂಸ್ಥೆಯ ಆದಾಯ ಕುಸಿತಗೊಳ್ಳುವ ಭೀತಿ ಎದುರಿಸುತ್ತಿದೆ.
ಆ್ಯಪಲ್ನ 9 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಪೋನ್ ಮಾರಾಟದಲ್ಲಿ ಕುಸಿತ ಕಂಡು ಬಂದಿದ್ದು, ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ಮಾರಾಟದಲ್ಲಿ ಶೇ.20ರಷ್ಟು ಕಡಿತವಾಗಿದೆ. ಅಲ್ಲದೆ 13 ವರ್ಷಗಳಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಂಪೆನಿಯ ಆದಾಯ ಕೂಡ ಕುಸಿದಿದ್ದು, ಪ್ರಸಕ್ತ ವರ್ಷ 6 ಬಿಲಿಯನ್ ಡಾಲರ್ ಗೆ ಆದಾಯ ಕುಸಿದಿದೆ. ಇನ್ನು ಆ್ಯಪಲ್ ಸಂಸ್ಥೆ ತನ್ನ ಖ್ಯಾತ ಆ್ಯಪಲ್ ಮೂಸಿಕ್ಸ್ ಗ್ರಾಹಕರನ್ನು 13 ಮಿಲಿಯನ್ ಗೆ ಏರಿಸಿಕೊಂಡಿದ್ದರೂ, ಐಫೋನ್ ಮಾರಾಟದ ಮೇಲೆ ಪರಿಣಾಮ ಬೀರುವಲ್ಲಿ ಇದು ವಿಫಲವಾಗಿದೆ.
ಚೀನಾದಲ್ಲಿ ಆ್ಯಪಲ್ ಸಂಸ್ಥೆಯ ಮಾರಾಟ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಕುಸಿದಿದ್ದು, ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ತ್ರೈಮಾಸಿಕದಲ್ಲೂ ಕಂಪೆನಿಯ ಮಾರಾಟ ಕುಸಿಯುವ ನಿರೀಕ್ಷೆಯಿದೆ. ಇನ್ನು ಆ್ಯಪಲ್ ಷೇರುಗಳು ಕೂಡ ಶೇ. 8ರಷ್ಟು ಕುಸಿಯುವ ಸಾಧ್ಯತೆಯಿದ್ದು, ಕಳೆದ ಫೆಬ್ರುವರಿಯಿಂದೀಚೆಗೆ ಇದೇ ಮೊದಲ ಬಾರಿಗೆ ಷೇರು ಮೌಲ್ಯ 100 ಡಾಲರ್ ಗಿಂತ ಕೆಳಗಿಳಿಯುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಆ್ಯಪಲ್ ಸಂಸ್ಥೆಯ ಷೇರು ಮರುಖರೀದಿ, ಡಿವಿಡೆಂಡ್ ಹೆಚ್ಚಳ ಇತ್ಯಾದಿ ಪ್ರಯತ್ನಗಳು ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ವರದಿಗಳು ತಿಳಿಸಿವೆ.
ಆ್ಯಪಲ್ ಇತರೆ ಉತ್ಪನ್ನಗಳಾದ ಮ್ಯಾಕ್, ಐಮ್ಯಾಕ್ ಮತ್ತು ಐಪಾಡ್ ಗಳ ಮಾರಾಟದಲ್ಲೂ ಕಡಿತ ಕಂಡುಬಂದಿದೆ.
ಗೇಮ್ ಗಳ ಮೂಲಕ ಗ್ರಾಹಕರ ಸೆಳೆಯಲು ಆ್ಯಪಲ್ ಪ್ರಯತ್ನ
ಇದೇ ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ಗೇಮ್ ಗಳ ಮೇಲೆ ಹೆಚ್ಚುತ್ತಿರುವ ಬೇಡಿಕೆ ಹಿನ್ನಲೆಯಲ್ಲಿ ತನ್ನ ಐಫೋನ್ ಗಳಲ್ಲಿ ಆ್ಯಪಲ್ ನೂತನ ತಂತ್ರಜ್ಞಾನದ ಗೇಮ್ ಗಳನ್ನು ಅಳವಡಿಸಲು ಚಿಂತನೆ ನಡೆಸಿದೆ. ಆ ಮೂಲಕ ಗ್ರಾಹಕರ ಸೆಳೆಯಲ್ಲು ಆ್ಯಪಲ್ ಸಂಸ್ಥೆ ಮುಂದಾಗಿದ್ದು, ತನ್ನ ಹಾರ್ಡ್ ವೇರ್ ಗಳನ್ನು ಅಪ್ ಗ್ರೇಡ್ ಮಾಡಬೇಕಾಗಿ ತಂತ್ರಜ್ಞಾನ ವಿಶ್ಲೇಷಕ ಜ್ಯಾಕ್ ಡಾ ಸಂಶೋಧನಾ ಕೇಂದ್ರದ ಜಾನ್ ಡಾವ್ಸನ್ ಅಭಿಪ್ರಾಯಪಟ್ಟಿದ್ದಾರೆ.