ನವದೆಹಲಿ: ಖ್ಯಾತ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿಯ 4ನೇ ತ್ರೈಮಾಸಿಕ ವರದಿ ಬಿಡುಗಡೆಯಾಗಿದ್ದು, ತನ್ನ ಒಟ್ಟಾರೆ ಲಾಭಾಂಶದಲ್ಲಿ ಶೇ.11.7 ರಷ್ಟು ಇಳಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.
ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿರುವ 4ನೇ ತ್ರೈಮಾಸಿಕ ವರದಿಯಲ್ಲಿನ ಅಂಕಿ ಅಂಶಗಳ ಪ್ರಕಾರ ಮಾರ್ಚ್ 31ಕ್ಕೆ ಮುಕ್ತಾಯವಾದಂತೆ ಸಂಸ್ಥೆ ಒಟ್ಟಾರೆ ಲಾಭಾಂಶದ ಪೈಕಿ ಶೇ.11.7 ರಷ್ಟು ಇಳಿಕೆ ಕಂಡುಬಂದಿದೆ. ನಾಲ್ಕನೇ ತ್ರೈಮಾಸಿಕ ವರದಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯ ನೆಟ್ ಫ್ರಾಫಿಟ್ 1,133.6 ರು.ಗಳಾಗಿದ್ದು, ಕಳೆದ ವರ್ಷ 1,284.2 ರು. ಗಳ ನೆಟ್ ಪ್ರಾಫಿಟ್ ದಾಖಲಾಗಿತ್ತು.
ಒಟ್ಟಾರೆ ಆದಾಯದಲ್ಲಿ ಇಳಿಕೆ ಕಂಡುಬಂದಿದ್ದರೂ, ಸಂಸ್ಥೆಯ ನೆಟ್ ಮಾರಾಟ ಅಂಕಿ ಅಂಶಗಳಲ್ಲಿ ಏರಿಕೆ ಕಂಡುಬಂದಿದೆ. ಮಾರಾಟದ ವಿಭಾಗದಲ್ಲಿ ಸಂಸ್ಥೆ ಶೇ.15.27ರಷ್ಟು ಅಭಿವೃದ್ಧಿ ಸಾಧಿಸಿದೆ. ಈ ಭಾರಿ ಮಾರುತಿ ಸುಜುಕಿ ಸಂಸ್ಥೆ ತನ್ನ ಆದಾಯವನ್ನು ರು.15,300ಕ್ಕೆ ಏರಿಸಿಕೊಂಡಿದ್ದು, ಕಳೆದ ಸಾಲಿನಲ್ಲಿ ಸಂಸ್ಥೆಯ ಆದಾಯ ರು.13,273 ಕೋಟಿಯಷ್ಟಿತ್ತು. ಇನ್ನು ಈ ಭಾರಿ ಲಾಭಾಂಶ ಕಡಿಮೆಯಾಗಲು ಸಂಸ್ಥೆ ಹಲವು ಕಾರಣಗಳನ್ನು ನೀಡಿದ್ದು, ಮೀಸಲಾತಿ ಗೊಂದಲ, ಜಾಹಿರಾತುಗಳಿಗಾಗಿ ಹೆಚ್ಚು ವೆಚ್ಚ ಮತ್ತು ಕಡಿಮೆ ಆದಾಯದಿಂದಾಗಿ ಈ ಭಾರಿ ಲಾಭಾಂಶ ಕಡಿಮೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಕಾರುಗಳ ಮಾರಾಟ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದ್ದು, ಒಟ್ಟಾರೆ ಮಾರಾಟದ ಪೈಕಿ ಶೇ.12.5 ರಷ್ಟು ಏರಿಕೆಯಾಗಿದ್ದು, ಮಾರಾಟದ ಆದಾಯ 14,930 ಕೋಟಿಗಳಿಗೇರಿದೆ ಎಂದು 4ನೇ ತ್ರೈಮಾಸಿಕ ವರದಿಯಲ್ಲಿ ತಿಳಿಸಲಾಗಿದೆ.