ವಾಣಿಜ್ಯ

ಜಾಹೀರಾತಿನಲ್ಲಿ ಪ್ರಧಾನಿ ಮೋದಿ ಚಿತ್ರ ಬಳಸಿದ್ದಕ್ಕೆ ಜಿಯೋಗೆ ರು.500 ದಂಡ ಸಾಧ್ಯತೆ!

Manjula VN

ನವದೆಹಲಿ: ದೇಶದಾದ್ಯಂತ ಸಾಕಷ್ಟು ಸುದ್ದಿಯಲ್ಲಿರುವ ರಿಲಯನ್ಸ್ ಜಿಯೋ ತನ್ನ ಜಾಹೀರಾತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚಿತ್ರವನ್ನು ಬಳಸಿಕೊಂಡಿರುವ ಕಾರಣಕ್ಕೆ ಕೇಂದ್ರ ಸರ್ಕಾರ ರಿಲಯನ್ಸ್ ಜಿಯೋಗೆ ದಂಡ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.  

ಕಂಪನಿ ಅನುಮತಿ ಪಡೆಯದೆಯೇ ಜಾಹೀರಾತಿನಲ್ಲಿ ಮೋದಿಯವರ ಚಿತ್ರ ಬಳಕೆ ಮಾಡಿತ್ತು. ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕೆ ಇದೀಗ ಕಂಪನಿ ದಂಡ ತೆರಲೇಬೇಕಾದ ಪರಿಸ್ಥಿತಿ ಎದುರಾಗಿದ್ದು, ರಿಲಯನ್ಸ್ ಕಂಪನಿಯಿಂದ ರು.500 ದಂಡ ವಸೂಲಿ ಮಾಡಲು ಗ್ರಾಹಕರ ವ್ಯವಹಾರಗಳ ಸಚಿವಾಲಯ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಿಲಯನ್ಸ್ ಜಿಯೋ ತನ್ನ ಜಾಹೀರಾತಿನಲ್ಲಿ ಪ್ರಧಾನಿ ಮೋದಿಯವರ ಚಿತ್ರವನ್ನು ಬಳಸಿಕೊಳ್ಳಲು ಅನುಮತಿಯನ್ನು ಪಡೆದಿರಲಿಲ್ಲ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ರಾಜ್ಯಸಭೆಗೆ ಮಾಹಿತಿ ನೀಡಿತ್ತು.

ಸಮಾಜವಾದಿ ಪಕ್ಷದ ನೀರಜ್ ಶೇಖರ್ ಅವರು ರಾಜ್ಯಸಭೆಯಲ್ಲಿ ಈ ಕುರಿತು ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಅವರು, ಜಿಯೋ ಜಾಹಿರಾತಿನಲ್ಲಿ ಮೋದಿ ಅವರ ಭಾವಚಿತ್ರ ಬಳಿಸಿಕೊಂಡಿರುವ ವಿಷಯ ನನ್ನ ಗಮನಕ್ಕೂ ಬಂದಿದೆ. ಆದರೆ ಮೋದಿ ಅವರ ಭಾವಚಿತ್ರ ಬಳಸಿಕೊಳ್ಳಲು ಕಚೇರಿ ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದರು.

ಜಿಯೊ ಜಾಹೀರಾತಿನಲ್ಲಿ ಮೋದಿ ಕಾಣಿಸಿಕೊಂಡಿರುವ ಬಗ್ಗೆ ಸಮಾಜವಾದಿ ಪಕ್ಷದ ಸಂಸದ ನೀರಜ್ ಶೇಖರ್‌ ಅವರು ಪ್ರಶ್ನೆ ಕೇಳಿದ್ದರು. ಇದಕ್ಕೆ ಪಿಎಂಒ ಲಿಖಿತ ಉತ್ತರ ಸಲ್ಲಿಸುವುದರ ಜತೆಗೆ ಈ ಸಂಬಂಧ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಗ್ರಾಹಕ ವ್ಯವಹಾರಗಳ ಸಚಿವಾಲಯದ್ದು ಎಂದು ಪಿಎಂಒ ಸ್ಪಷ್ಟಪಡಿಸಿತ್ತು.

1950ರ ಲಾಂಛನ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆಯಡಿ ಜಿಯೋ ಕಂಪನಿ ವಿರುದ್ಧ ಕ್ರಮಕೈಗೊಳ್ಳುತ್ತೀರ ಎಂದು ನೀರಜ್ ಶೇಖರ್ ಕೇಳಿದ್ದರು. ಇದಕ್ಕುತ್ತರಿಸಿದ ರಾಥೋರ್ ಅವರು, ಲಾಂಛನ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಅಧಿಕಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯಕ್ಕಿದೆ ಎಂದಿದ್ದರು.

ರಿಲಯನ್ಸ್ ಜಿಗೋಗೆ ಚಾಲನೆಯ ದೊರಕಿದ ಬಳಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಕಂಪನಿಯ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು.

SCROLL FOR NEXT