ನವದೆಹಲಿ: ನಗದುರಹಿತ ವಹಿವಾಟಿಗೆ ದೇಶಾದ್ಯಂತ ಬೇಡಿಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಡಿಜಿಟಲ್ ಪಾವತಿ ಪಾಲಿಸಲು ಪೇಟಿಎಂ ಹೊಸದಾಗಿ ಆರಂಭಿಸಿರುವ ಟೋಲ್ ಫ್ರೀ ಸಂಖ್ಯೆಗೆ 24 ಗಂಟೆಯೊಳಗೆ ಒಂದೂವರೆ ಲಕ್ಷ ಕರೆಗಳು ಬಂದಿವೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯಿಸಿದ ಪೇಟಿಎಂ ಹಿರಿಯ ಉಪಾಧ್ಯಕ್ಷ ದೀಪಕ್ ಅಬ್ಬೊಟ್, ನಾವು ಇತ್ತೀಚೆಗೆ ಆರಂಭಿಸಿದ ಟೋಲ್ ಫ್ರೀ ಸಂಖ್ಯೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭಗೊಂಡ ಮೊದಲ ದಿನವೇ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಕರೆ ಮಾಡಿದ್ದಾರೆ. ನಮ್ಮ ಈ ಸೇವೆಗೆ ದೇಶದ ಜನರು ನೀಡಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿದ್ದೇವೆ ಎಂದು ಹೇಳಿದರು.
ಟೋಲ್ ಫ್ರೀ ಸಂಖ್ಯೆ 1800 1800 1234 ಆಗಿದ್ದು ನಿನ್ನೆ ಮೊನ್ನೆ ಆರಂಭಗೊಂಡಿದೆ. ಜನರು ತಮ್ಮ ಮೊಬೈಲ್ ಸಂಖ್ಯೆಯಿಂದ ಈ ನಂಬರ್ ಗೆ ಕರೆ ಮಾಡಿ ಪಿನ್ ನಂಬರ್ ಸೆಟ್ ಮಾಡಿಕೊಳ್ಳಬಹುದು. ಪಿನ್ ಸಂಖ್ಯೆ ಪಡೆದ ನಂತರ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಪಡೆದು ಪೆಟಿಎಂ ಹಣವನ್ನು ವರ್ಗಾವಣೆ ಮಾಡುತ್ತದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಪೇಟಿಎಂ ಉಪಾಧ್ಯಕ್ಷ (ವಾಣಿಜ್ಯ) ಕೃಷ್ಣ ಹೆಗ್ಡೆ, ಪ್ರತಿ ಗಂಟೆಗೂ ಹೊಸ ಸಂಪರ್ಕವನ್ನು ಸೇರಿಸಲಾಗುತ್ತಿದೆ. ನಮ್ಮ ಸೇವೆಗೆ ಜನರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಗದುರಹಿತ ವಹಿವಾಟು ಅಧಿಕವಾಗಲಿದೆ. ಕಳೆದ ಕೆಲ ವಾರಗಳಿಂದ ಸಣ್ಣ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಕೂಡ ಪೇಟಿಎಂ ಮೂಲಕ ಹಣ ವರ್ಗಾವಣೆ ಮಾಡಲು ಆರಂಭಿಸಿದ್ದಾರೆ ಎಂದು ಹೇಳಿದರು.