ನವದೆಹಲಿ: ನಿರೀಕ್ಷೆಯಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 2.21 ರು ಮತ್ತು ಡೀಸೆಲ್ ದರದಲ್ಲಿ 1.79 ರು. ಏರಿಕೆ ಮಾಡಲಾಗಿದೆ.
ನೂತನ ದರಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿನ ವ್ಯಾಟ್ ಏರಿಕೆಯೇ ದರ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕೇಂದ್ರ ಸರ್ಕಾರ ಈ ಹಿಂದೆ 2.84ರು ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು 2.11ರು, ಏರಿಕೆ ಮಾಡಿತ್ತು. ಇದೇ ಕಾರಣಕ್ಕೆ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡಿವೆ ಎಂದು ಹೇಳಲಾಗುತ್ತಿದೆ.
ತೈಲೋತ್ಪನ್ನ ಸಂಸ್ಥೆಗಳು ಪ್ರತೀ ತಿಂಗಳ 1 ಮತ್ತು 16ದಿನಾಂಕದಂದು ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಲು ನಿರ್ಧರಿಸಿದ್ದು, ಅದರಂತೆ ನಿನ್ನೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಮಾಡಿವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಚಾತೈಲ ದರ 62.82 ಜಾಲರ್ ಗೆ ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್ ಡೀಸೆಲ್ ಕೂಡ 57.43ಕ್ಕೆ ಏರಿಕೆಯಾಗಿತ್ತು. ಹೀಗಾಗಿ ತೈಲೋತ್ಪನ್ನ ಸಂಸ್ಥೆಗಳು ದರ ಏರಿಕೆ ಮಾಡಿವೆ.
10 ದಿನಗಳಿಗೂ ಮೊದಲೇ ತೈಲೋತ್ಪನ್ನ ಸಂಸ್ಥೆಗಳು ತೈಲ ದರ ಏರಿಕೆಗೆ ಮುಂದಾಗಿದ್ದವು. ಆದರೆ ಸಂಸತ್ ಕಲಾಪದಲ್ಲಿ ತೈಲ ದರ ಏರಿಕೆ ಅಡ್ಡಿಯುಂಟು ಮಾಡುವ ಆತಂಕದಿಂದ ಕೇಂದ್ರ ಸರ್ಕಾರ ತೈಲ ದರ ಏರಿಕೆಯನ್ನು ಮುಂದೂಡಿತ್ತು. ಅದರಂತೆ ಶುಕ್ರವಾರ ಸಂಸತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ನಿನ್ನೆ ನಡೆದ ಸಭೆಯಲ್ಲಿ ತೈಲೋತ್ಪನ್ನ ಸಂಸ್ಥೆಗಳು ದರ ಏರಿಕೆ ಮಾಡಿವೆ.