ನವದೆಹಲಿ: ಗರಿಷ್ಠ ಮುಖಬೆಲೆಯ ನೋಟು ನಿಷೇಧದ ಬಳಿಕ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಹಕರ ಸ್ನೇಹಿ ಆ್ಯಪ್ ಹೊಸ ಬಗೆಯ ಆಧಾರ್ ಪೇಮೆಂಟ್ ಆ್ಯಪ್ ಸಜ್ಜುಗೊಳಿಸಿದ್ದು ಡಿಸೆಂಬರ್ 25ರಂದು ಬಿಡುಗಡೆಗೊಳಿಸಲಿದೆ.
ಐಡಿಎಫ್ಎ ಬ್ಯಾಂಕ್ ಮತ್ತು ಯುಐಡಿಎಐ(ಆಧಾರ್) ಜತೆಗೂಡಿ ಸಿದ್ಧಪಡಿಸಿರುವ ಈ ಆ್ಯಪ್ ಬಳಕೆಗೆ ತುಂಬಾ ಸರಳವಾಗಿದೆ. ಈ ಆ್ಯಪನ್ನು ವ್ಯಾಪಾರಿಗಳು ಮೊತ್ತ ಮೊದಲಾಗಿ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಡೌನ್ ಲೋಡ್ ಮಾಡಿಕೊಳ್ಳಬೇಕು. ಇದಕ್ಕೆ ಕೇವಲ 2000 ರು ಬೆಲೆಗೆ ಸಿಗುವ ಬೆರಳಚ್ಚು ಬಯೋಮೆಟ್ರಿಕ್ ಸಾಧನವನ್ನು ಜೋಡಿಸಿಕೊಳ್ಳಬೇಕು.
ಗ್ರಾಹಕ ತಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ವ್ಯಾಪಾರಿಗೆ ನೀಡಬೇಕು. ಅದನ್ನು ಅವರು ಆ್ಯಪ್ ಗೆ ಫೀಡ್ ಮಾಡುತ್ತಾರೆ. ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಹೊಂದಿರುವ ಗ್ರಾಹಕರ ಬ್ಯಾಂಕ್ ಖಾತೆಯ ಈ ಪಾವತಿ ವ್ಯವಹಾರಕ್ಕೆ ಆ್ಯಪ್ ಮೂಲಕ ಒಳಪಡುತ್ತದೆ. ಆಗ ಗ್ರಾಹಕರು ತಮ್ಮ ಬೆರಳಚ್ಚನ್ನು ಬಯೋಮೆಟ್ರಿಕ್ ಸಾಧನದಲ್ಲಿ ದಾಖಲಿಸಬೇಕು ಇದುವೇ ಪಾಸ್ ವರ್ಡ್ ಆಗಿ ಕೆಲಸ ಮಾಡುತ್ತದೆ. ಆಗ ವ್ಯಾಪಾರಿಗೆ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಪಾವತಿಯಾಗುತ್ತದೆ.
ಯುಎಐಡಿಎಐ ಸಿಇಓ ಅಜಯ್ ಭೂಷಣ್ ಅವರು ಈ ಸರಳ ವ್ಯವಸ್ಥೆಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸುವ ಅವಶ್ಯಕತೆಯಿಲ್ಲ. ಅಲ್ಲದೆ ಕಾರ್ಡ್ ಗಳ ಪಾಸ್ ವರ್ಡ್ ಸೋರಿಕೆಯಾಗುವ ಭಯವಿಲ್ಲ. ಇಲ್ಲಿ ಮತ್ತೊಂದು ಅಂಶ ವೀಸಾ/ಮಾಸ್ಟರ್ ಕಾರ್ಡ್ ಸಂಸ್ಥೆಗಳಿಗೆ ಯಾವುದೇ ಶುಲ್ಕ ಪಾವತಿಯಾಗುವುದಿಲ್ಲ ಎಂದು ಹೇಳಿದ್ದಾರೆ.
ದೇಶದಾದ್ಯಂತ ಈಗಾಗಲೇ 40 ಕೋಟಿ ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಯೊಂದಿಗೆ ಜೋಡಿಸಲ್ಪಟ್ಟಿದ್ದು 2017ರ ಮಾರ್ಚ್ ಒಳಗೆ ಎಲ್ಲ ಆಧಾರ್ ಕಾರ್ಡ್ ಗಳನ್ನು ಬ್ಯಾಂಕ್ ಖಾತೆಗೆ ಜೋಡಿಸುವ ಗುರಿ ಹೊಂದಲಾಗಿದೆ ಎಂದು ಅಜಯ್ ಭೂಷಣ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos