ವಾಣಿಜ್ಯ

ಮಾರ್ಚ್ 31ರ ನಂತರ ಹಳೆಯ ನೋಟು ಹೊಂದಿದ್ದರೆ ದಂಡ, ಜೈಲು ಶಿಕ್ಷೆ; ವಿಧೇಯಕ ಜಾರಿಗೆ ಸರ್ಕಾರ ಒಪ್ಪಿಗೆ

Sumana Upadhyaya
ನವದೆಹಲಿ: ಮಾರ್ಚ್ 31ರಿಂದ ನಂತರ ಹಳೆಯ ನಿಷೇಧಿತ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಹೊಂದಿರುವವರಿಗೆ ದಂಡ ಬೀಳುತ್ತದೆ. ಹಳೆಯ ನೋಟುಗಳನ್ನು ಇಟ್ಟುಕೊಂಡಿದ್ದರೆ ಅವುಗಳಿಗೆ ದಂಡ ವಿಧಿಸುವ ಸುಗ್ರೀವಾಜ್ಞೆಗೆ  ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ. 
ಪ್ರಧಾನ ಮಂತ್ರಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು. ಸ್ಪೆಸಿಫಿಕ್ ಬ್ಯಾಂಕ್ ನೋಟ್ ಸೆಸ್ಸೇಷನ್ ಆಫ್ ಲೈಯಬಿಲಿಟೀಸ್ ಆರ್ಡಿನೆನ್ಸ್ ಎಂದು ವಿಧೇಯಕಕ್ಕೆ ಹೆಸರಿಡಲಾಗಿದೆ. ಇದರ ಪ್ರಕಾರ, ಮಾರ್ಚ್ 31ರ ನಂತರ 10ಕ್ಕಿಂತ ಹೆಚ್ಚು ಹಳೆಯ 500 ಮತ್ತು 1000ದ ನೋಟುಗಳನ್ನು ಹೊಂದಿದ್ದರೆ 4 ವರ್ಷಗಳ ಜೈಲು ಶಿಕ್ಷೆ ಮತ್ತು ಹೊಂದಿರುವ ನೋಟಿನ ಮೊತ್ತದ 5 ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ.
ಮುಂದಿನ ತಿಂಗಳ ಕೇಂದ್ರ ಬಜೆಟ್  ಅಧಿವೇಶನದಲ್ಲಿ ವಿಧೇಯಕ ಕಾನೂನಾಗಿ ಜಾರಿಗೆ ಬರುವ ನಿರೀಕ್ಷೆಯಿದೆ. 
ವಿಧೇಯಕದ ಪ್ರಕಾರ, ಹಳೆಯ ನೋಟುಗಳನ್ನು ಸಂಶೋಧನೆಗೆ, ನಾಣ್ಯಶಾಸ್ತ್ರ ಅಧ್ಯಯನಕ್ಕೆ ಮಾತ್ರ ಇಟ್ಟುಕೊಳ್ಳಬಹುದು. ಪರ್ಯಾಯವಾಗಿ ಅಕ್ರಮವಾಗಿ ಯಾವುದೇ ಕಾರಣಕ್ಕೂ ಹಳೆಯ ನೋಟುಗಳನ್ನು ಬಳಸದಂತೆ ತಡೆಯಲು ಸರ್ಕಾರ ಈ ನಿಯಮ ಜಾರಿಗೆ ತರಲಿದೆ.
ಹಳೆಯ ನೋಟುಗಳು ಹೊಂದಿದ್ದು ನಿರ್ದಿಷ್ಟ ಕಾರಣಗಳಿಂದ ಮಾರ್ಚ್ 31ರೊಳಗೆ ಬ್ಯಾಂಕಿನಲ್ಲಿ ಇಡಲು ಸಾಧ್ಯವಾಗದವರಿಗೆ ಆ ಬಳಿಕ ಒಂದು ನಿರ್ದಿಷ್ಟ ಷರತ್ತುಬದ್ಧ ನಿಯಮದ ಮೂಲಕ ಠೇವಣಿಯಿಡಲು ಅವಕಾಶವಿದೆ. ಮಾರ್ಚ್ 31ರೊಳಗೆ ಹಳೆಯ ನೋಟುಗಳನ್ನು ಏಕೆ ನೀಡಲಿಲ್ಲ ಎಂದು ಸ್ಪಷ್ಟ ಕಾರಣ ನೀಡಬೇಕಾಗುತ್ತದೆ.
ವಿಧೇಯಕದ ಪ್ರಕಾರ ಈ ತಿಂಗಳ 30ರ ನಂತರ ನಿಷೇಧಿತ ನೋಟುಗಳನ್ನು ನೇರವಾಗಿ ಆರ್ ಬಿಐಯಲ್ಲಿ ಠೇಣಿಯಿಡಬೇಕು ಮತ್ತು ರಿಯಾಯಿತಿಯ ಅವಧಿ ನಂತರ ನಿರ್ಧರಿಸಲಾಗುತ್ತದೆ.
SCROLL FOR NEXT