ಮುಂಬೈ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಉತ್ತೇಜನಕಾರಿ ವಾತಾವರಣ ನಿರ್ಮಾಣಗೊಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 232 ಅಂಕಗಳ ಏರಿಕೆ ಕಂಡಿದೆ.
ಅರುಣ್ ಜೇಟ್ಲಿ ಅವರು ಇಂದು ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಭಾರತದ ಜಿಡಿಪಿ ದರ ಶೇ.7-7.5ರಷ್ಟು ಬೆಳವಣಿಗೆಯಾಗಿದೆ. ಅಂತೆಯೇ ಭವಿಷ್ಯದಲ್ಲಿ ಶೇ.8ರಿಂದ 10ರವರೆಗೆ ಬೆಳೆಯುವ ಸಾಧ್ಯತೆ ಇದೆ. ಇದು ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತೋಹಾರಿ ವಾತವಾರಣ ನಿರ್ಮಾಣ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 232.43 ಅಂಕಗಳಷ್ಟು ಏರಿಕೆ ಕಾಣುವ ಮೂಲಕ ಶೇ. 1.01 ಏರಿಕೆಯೊಂದಿಗೆ 23,208.43 ಅಂಕಗಳಿಗೇರಿಕೆಯಾಗಿದೆ.
ಇನ್ನು ನಿಫ್ಟಿ ಕೂಡ 69.05ರಷ್ಟುಅಂಕಗಳನ್ನು ಏರಿಕೆ ಕಾಣುವ ಮೂಲಕ ಶೇ.0.99 7,039.65 ಅಂಕಗಳಿಗೆ ಏರಿಕೆಯಾಗಿದೆ. ಪ್ರಮುಖವಾಗಿ ಬ್ಯಾಕಿಂಗ್ ಕ್ಷೇತ್ರಗಳು ಹೆಚ್ಚು ಲಾಭ ಗಳಿಸಿದೆ. ನಿನ್ನೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು 2016-17ನೇ ಸಾಲಿನ ರೈಲ್ವೇ ಬಜೆಟ್ ಮಂಡಿಸಿದ ಬಳಿಕ ಷೇರುಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೆನ್ಸೆಕ್ಸ್ 79 ಅಂಕಗಳ ಕುಸಿತಕಂಡಿತ್ತು.