ನವದೆಹಲಿ: ದೇಶದ ಆರ್ಥಿಕ ಚೇತರಿಕೆಯ ಭರವಸೆಯನ್ನು ಕೇಂದ್ರ ಅಂಕಿಅಂಶ ಕಚೇರಿ (ಸಿಎಸ್‍ಒ) ಮಂಗಳವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ನುಚ್ಚು ನೂರುಗೊಳಿಸಿವೆ. 2015ರ ನವೆಂಬರ್ ನಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಶೇ.3.2ರಷ್ಟು ಕುಸಿದಿದೆ.
ಇದು ಕಳೆದ ನಾಲ್ಕು ವರ್ಷಗಳಲ್ಲೇ ಕನಿಷ್ಠ ಪ್ರಗತಿಯಾಗಿದೆ. ತಯಾರಿಕಾ ವಲಯ ಮತ್ತು ಬಂಡವಾಳ ಸರಕು ಉತ್ಪಾದನೆ ತೀವ್ರವಾಗಿ ಕುಸಿದಿದ್ದರಿಂದ ತಯಾರಿಕಾ ವಲಯದ ಪ್ರಗತಿ ಈ ಪ್ರಮಾಣಕ್ಕೆ ಇಳಿದಿದೆ. 2014ರ ನವೆಂಬರ್‍ನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಶೇ.5.2ರಷ್ಟು ಪ್ರಗತಿ ದಾಖಲಿಸಿತ್ತು.
2011ರ ಅಕ್ಟೋಬರ್‍ನಲ್ಲಿ ಶೇ.4.7ರಷ್ಟು ಪ್ರಗತಿ ದಾಖಲಿಸಿದ್ದ ನಂತರದಲ್ಲಿ ಇದು ಅತ್ಯಂತ ಕನಿಷ್ಠ ಪ್ರಗತಿಯಾಗಿದೆ. ಕಳೆದ ಅಕ್ಟೋಬರ್‍ನಲ್ಲಿ ಐಐಪಿ ಶೇ.9.8ರಷ್ಟಿತ್ತು. ಅದನ್ನು ಪರಿಷ್ಕರಿಸಲಾಗಿದ್ದು ಶೇ.9.9ಕ್ಕೆ ಹೆಚ್ಚಿಸಲಾಗಿದೆ. ಈ ಅಂಕಿಅಂಶಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳ ಪ್ರಗತಿಯಲ್ಲಿ ಭಾರಿ ಹಿನ್ನಡೆಕಂಡಿದೆ. ಐಐಪಿಯಲ್ಲಿ ಅತಿ ಹೆಚ್ಚು ಶೇ.75ರಷ್ಟು ಮೌಲ್ಯ ಹೊಂದಿರುವ ತಯಾರಿಕಾ ವಲಯ ಶೇ.4.4ರಷ್ಟು ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ತಯಾರಿಕೆ ಶೇ.4.7ರಷ್ಟು ಪ್ರಗತಿ ಕಂಡಿತ್ತು.
2015ರ ನವೆಂಬರ್‍ನಲ್ಲಿ ತಯಾರಿಕಾ ವಲಯದಲ್ಲಿರುವ 22 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ನೆಗೆಟಿವ್ ಬೆಳವಣಿಗೆ ಕಂಡಿವೆ. ಹೂಡಿಕೆಯ ಸೂಚ್ಯಂಕವಾಗಿರುವ ಬಂಡವಾಳ ಸರಕು ವಲಯ ಶೇ.24.4ರಷ್ಟು ಕುಸಿದಿದೆ.
ಹಣದುಬ್ಬರ ಏರಿಕೆ: ನವೆಂಬರ್‍ನಲ್ಲಿ ಗ್ರಾಹಕ ದರ ಆಧರಿತ (ಸಿಪಿಐ) ಹಣ ದುಬ್ಬರ ಪ್ರಮಾಣ ಶೇ.5.41ರಷ್ಟಿದ್ದದುಡಿಸೆಂಬರ್‍ನಲ್ಲಿ ಶೇ.5.6ಕ್ಕೆ ಏರಿಕೆ ಕಂಡಿದೆ. ಬೇಳೆ ಕಾಳುಗಳ ದರಗಳು ಶೇಕಡ 46ರಷ್ಟು ದುಬಾರಿಯಾಗಿದ್ದು ಮತ್ತು ಸಂಬಾರ ಪದಾರ್ಥಗಳ ದರಗಳು ಶೇ.10.8ರಷ್ಟು ದುಬಾರಿಯಾಗಿದ್ದು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ.ಫೆಬ್ರವರಿಯಲ್ಲಿ ರಿಸರ್ವ್ ಬ್ಯಾಂಕ್‍ನ ಹಣಕಾಸು ನೀತಿ ಪರಿಶೀಲನ ಸಭೆ ನಡೆಯಲಿದೆ. ಈಗ ಹಣದುಬ್ಬರ ದರ ಏರುಮುಖ ಕಾಣುತ್ತಿರುವುದರಿಂದ ಪ್ರಮುಖ ಸಾಲಗಳ ಮೇಲಿನ ಬಡ್ಡಿ ದರ ಗಳನ್ನು ಕಡಿತಗೊಳಿಸುವ ಸಾಧ್ಯತೆಗಳು ಕುಂಠಿತಗೊಂಡಿವೆ.
ಏಳನೇ ವೇತನ ಆಯೋಗದ ಶಿಫಾರಸು ಮತ್ತು ಸಮಾನ ಹುದ್ದೆ ಸಮಾನ ವೇತನ ಜಾರಿಗೊಳಿಸದರೆ ಸರ್ಕಾರಿ ವೆಚ್ಚ ಮಾಡಲು ಹಣದ ಕೊರತೆ ಎದುರಾಗಲಿದೆ. ಹೀಗಾಗಿ ಪ್ರಸಕ್ತ ಹಣಕಾಸು ಸಾಲಿನಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಶೇ.3.5ರಷ್ಟು ವಿತ್ತೀಯ ಕೊರತೆ ಗುರಿಯನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಈಗಾಗಲೆ ಸೂಚನೆ ನೀಡಿದ್ದಾರೆ.
ವಿತ್ತೀಯ ಕೊರತೆ ಮಿತಿ ಹೆಚ್ಚಿಸುವುದು ಹಣದುಬ್ಬರವನ್ನು ಹೆಚ್ಚಿಸಿದಂತೆ ಎಂದು ಆರ್‍ಬಿಐ ಪರಿಗಣನೆಯಾಗಿದ್ದು ಸಾಧ್ಯವಾ ದಷ್ಟು ಈ ಹಣದುಬ್ಬರ ನಿಯಂತ್ರಿಸುವತ್ತ ನೋಟ ಹರಿಸುವ ಸಾಧ್ಯತೆಗಳಿವೆ. ಕಳೆದ ವರ್ಷದ ಜನವರಿಯಿಂದ ಆರ್ ಬಿಐ ರೆಪೊ ದರ ಶೇ.1.25ರಷ್ಟು ಕಡಿತಗೊಳಿಸಿದೆ. ಆರ್‍ಬಿಐ ಜನವರಿ ಅಂತ್ಯದೊಳಗೆ ರಿಟೇಲ್ ಹಣದುಬ್ಬರ ದರ ಶೇ.6 ಮತ್ತು 2017ರ ಮಾರ್ಚ್ ಒಳಗೆ ಶೇ.5ರಷ್ಟು ನಿಗದಿ ಮಾಡಿದೆ.