ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಸ್ಟಾರ್ಟ್‍ಅಪ್‍ಗಳಿಗಾಗಿಯೇ ಪ್ರತ್ಯೇಕ ಶಾಖೆಯನ್ನು ಆರಂಭಿಸಿದೆ. ಇದೇ ಸಂದರ್ಭದಲ್ಲಿ ಬ್ಯಾಂಕ್ ಸಂಪತ್ತು ನಿರ್ವಹಣೆ ಕ್ಷೇತ್ರಕ್ಕೂ ಪ್ರವೇಶಿಸಿದೆ.
ಸ್ಟಾರ್ಟ್‍ಅಪ್ ಶಾಖೆಯನ್ನು `ಎಸ್‍ಬಿಐ ಇನ್‍ಕ್ಯೂಬ್' ಎಂತಲೂ ಮತ್ತು ಸಂಪತ್ತು ನಿರ್ವಹಣೆ ಯೋಜನೆಗೆ `ಎಕ್ಸ್ ಕ್ಲೂಸಿಫ್ ' ಎಂದು ಹೆಸರಿಸಲಾಗಿದೆ. ಎರಡೂ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಬ್ಯಾಂಕ್‍ನ ಸಿಎಂಡಿ ಅರುಂಧತಿ ಭಟ್ಟಾಚಾರ್ಯ, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಚ್ಚಿನ ಆದಾಯ ಹೊಂದಿರುವ ವರ್ಗವನ್ನು ಗಮನದಲ್ಲಿಟ್ಟುಕೊಂಡು ಅಸೆಟ್ ಮ್ಯಾನೇಜ್‍ಮೆಂಟ್ ಕ್ಷೇತ್ರ ಪ್ರವೇಶಿಸಲಾಗುತ್ತಿದೆ ಎಂದು ತಿಳಿಸಿದರು. ಎಸ್‍ಬಿಐ ಇನ್ ಕ್ಯೂಬ್ ಬೆಳೆಯುತ್ತಿರುವ ಯುವ ಉದ್ಯಮಿಗಳಿಗೆ ಸಲಹಾ ಸೇವೆ ಸೇರಿದಂತೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ಯುವ ಉದ್ಯಮಿಗಳು ತಾವು ಕೈಗೊಳ್ಳುವ ವಹಿವಾಟಿನಲ್ಲಿ ಸ್ವಲ್ಪ ಪ್ರಬುದ್ಧತೆ ಗಳಿಸುತ್ತಿದ್ದಂತೆ ಹಣಕಾಸಿನ ನೆರವು ನೀಡಲಾಗುವುದು. ಸ್ಟಾರ್ಟ್‍ಅಪ್‍ಗಳು ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಸಂಗ್ರಹಿಸಲು ನೆರವಾಗಲಾಗುವುದೇ ಎಂಬ ಪ್ರಶ್ನೆಗೆ ಸದ್ಯ ಬ್ಯಾಂಕ್ ಆ ಕೆಲಸ ಮಾಡುವುದಿಲ್ಲ. ಇಲ್ಲಿ ಉದ್ಯಮಿಗಳಿಗೆ ಹಣಕಾಸಿನ ನೆರವು ಒದಗಿಸುವುದಷ್ಟೆ ಅಲ್ಲ, ಹಣಕಾಸನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ.