ಬೆಂಗಳೂರು, ಜನವರಿ 29, 2016: ಭಾರತ ಮತ್ತು ಅಮೆರಿಕ ನಡುವೆ ವಹಿವಾಟನ್ನು 500 ಬಿಲಿಯನ್ ಡಾಲರ್‍ಗೆ ಹೆಚ್ಚಿಸುವ ಮಹತ್ವದ ಗುರಿ ಹೊಂದಿರುವ ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ ಸಮಾವೇಶ –ವಿಷನ್ 2020 ಅನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಟೆಕ್ನಾಲಾಜಿಸ್ ಲಿಮಿಟೆಡ್‍ನ ಸಹ ಸ್ಥಾಪಕ ಮತ್ತು ಕ್ಯಾಟಮಾರನ್ಸ್ ಅಧ್ಯಕ್ಷ ಎನ್.ಆರ್. ನಾರಾಯಣಮೂರ್ತಿ, ಐಎಸಿಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಲಲಿತ್ ಕನೋಡಿಯಾ ಹಾಗೂ ಉದ್ಯಮದ ಪ್ರಮುಖರು ಹಾಜರಿದ್ದರು.
ಆಹ್ವಾನಿತರನ್ನು ಸ್ವಾಗತಿಸಿದ ಐಎಸಿಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಲಲಿತ್ ಕನೋಡಿಯಾ ಅವರು, `ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾದ ಭಾರತ ಮತ್ತು ಅಮೆರಿಕ ನಡುವೆ ಆರ್ಥಿಕ ಬಾಂಧವ್ಯವನ್ನು ಇನ್ನಷ್ಟು ಕ್ಷೇತ್ರಗಳಲ್ಲಿ ಗಟ್ಟಿಗೊಳಿಸಲು ಇದು ಸಕಾಲ. ಮುಖ್ಯವಾಗಿ, ಎರಡು ರಾಷ್ಟ್ರಗಳ ನಡುವೆ ಪರಸ್ಪರ ವಹಿವಾಟು, ಹೂಡಿಕೆಗೆ ಅನುವಾಗುವಂತೆ ಮಧ್ಯಮ, ಸಣ್ಣ ಕೈಗಾರಿಕೆಗಳ ನಡುವೆಯೂ ಸಹಭಾಗಿತ್ವ, ನಿರ್ಣಾಯಕ ಪಾತ್ರ ಈಗಿನ ಅಗತ್ಯವಾಗಿದೆÀ. ಈ ಸಮಾವೇಶವು ಉಭಯ ರಾಷ್ಟ್ರಗಳ ನಡುವೆ 2020ರ ವೇಳಗೆ ಪರಸ್ಪರ ವಹಿವಾಟನ್ನು 500 ಬಿಲಿಯನ್ ಡಾಲರ್‍ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ’ ಎಂದರು.
ಸಮಾವೇಶ ಉದ್ಘಾಟಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, `ವಹಿವಾಟಿನ ಪ್ರಮಾಣವನ್ನು 500 ಬಿಲಿಯನ್ ಡಾಲರ್‍ಗೆ ಹೆಚ್ಚಿಸುವ ಗುರಿ ಸಾಧನೆಗೆ ಆರ್ಥಿಕ ವಹಿವಾಟು ಹೆಚ್ಚಿಸುವ ಅಗತ್ಯವಿದೆ. ಜತೆಗೆ ತಂತ್ರಜ್ಞಾನದ ವಿನಿಮಯ, ಜಂಟಿ ಅಧ್ಯಯನ ಕೂಡಾ ಅಗತ್ಯವಿದ್ದು, ಇವುಗಳ ವ್ಯಾಪ್ತಿ ವಿಸ್ತಾರವಾಗಿದೆ’ ಎಂದರು.
ಕರ್ನಾಟಕ ಸರ್ಕಾರ ಕೃಷಿ ಉತ್ಪನ್ನಗಳ ಕ್ಷೇತ್ರಗಳಿಗೆ ರೂಪಿಸಿರುವ ಇ-ಆ್ಯಕ್ಷನ್ ವೇದಿಕೆಯನ್ನು ಉಲ್ಲೇಖಿಸಿದ ಅವರು, ಈ ಕಾರ್ಯಕ್ರಮವನ್ನು ಈಗ ಅನೇಕ ರಾಜ್ಯಗಳು ಅನುಸರಿಸಿವೆ. ದೇಶದಲ್ಲಿನ ಕೃಷಿ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಇಂಥ ಕ್ರಮಗಳು ಅಗತ್ಯವೂ ಹೌದು. ಕೃಷಿ ಕ್ಷೇತ್ರದಲ್ಲಿ ಪ್ರಗತಿಗೆ ಸಾಕಷ್ಟು ಕಾಲಾವಕಾಶವಿದೆ; ಇದನ್ನು ಸಾಕಾರಗೊಳಿಸಲು `ತೋಟದಿಂದ ಟೇಬಲ್‍ಗೆ’ ಕುರಿತು ಚಿಂತನೆ ನಡೆಸಬೇಕಾಗಿದೆ. ಅಮೆರಿಕ ಈ ಗುರಿ ಸಾಧನೆಗೆ ಪೂರಕವಾಗಿ ಹೂಡಿಕೆಗೆ ಮುಂದಾಗಬೇಕು ಎಂದು ಹೇಳಿದರು.
ಭಾಷಾ ಸಮಸ್ಯೆಯನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ತಂತ್ರಜ್ಞಾನವನ್ನು ಸ್ಥಳೀಯವಾಗಿ ಅವರದೇ ಭಾಷೆಯಲ್ಲಿ ಪರಿಚಯಿಸುವ ನವೀನ ಕ್ರಮಗಳ ಬಗೆಗೂ ಚಿಂತನೆ ನಡೆಯಬೇಕು. ಇದು, ಹೊರಗುತ್ತಿಗೆ ಅವಕಾಶಗಳನ್ನು ಹೆಚ್ಚಿಸಲಿದೆ. ಏಕೆಂದರೆ ಭಾಷಾ ಸಮಸ್ಯೆಯಿಂದಾಗಿ ಅನೇಕ ಕುಶಲಕರ್ಮಿಗಳು, ಸಾಂಪ್ರದಾಯಿಕ ವಿನ್ಯಾಸಗಾರರು ತಮ್ಮ ಪ್ರತಿಭೆಯನ್ನು ಬಾಹ್ಯ ಪ್ರಪಂಚಕ್ಕೆ ಪರಿಚಯಿಸಲಾಗುತ್ತಿಲ್ಲ ಎಂದರು. ಭಾರತದ ಎಲೆಕ್ಟ್ರಾನಿಕ್ ವಲಯವು ಹೆಚ್ಚು ಪ್ರಜ್ವಲಿಸುತ್ತಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ನವೀನತೆ ತರಲು ಸಾಧ್ಯವಾಗಲಿದೆ’ ಎಂದರು.
ಐಎಸಿಸಿ ಅಂಥ ಉದ್ಯಮ ಸಂಘಟನೆಗಳು ಪರಸ್ಪರ ವಹಿವಾಟು ಉತ್ತಮ ಪಡಿಸಲು ವೇದಿಕೆ ಕಲ್ಪಿಸಬೇಕು. ಭಾರತ ಈಗ ಅಮೆರಿಕದ ಮುಖ್ಯ ಹೂಡಿಕೆದಾರನಾಗಿ ಹೊರಹೊಮ್ಮಿರುವುದು ಶಾಘನೀಯ. ಅಮೆರಿಕದ ಅನೇಕ ಪ್ರತಿಷ್ಠಿತ ಸಂಸ್ಥೆಗಳ ನೇತೃತ್ವವನ್ನು ಭಾರತೀಯ ಮೂಲದ ವ್ಯಕ್ತಿಗಳು ವಹಿಸಿದ್ದಾರೆ. ಇದು, ದೇಶದ ಆರ್ಥಿಕ ವಹಿವಾಟು, ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಒಯ್ಯಲಿದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜ್ಞಾನ ಪಾಲುದಾರರು ಕುರಿತ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಲಾಯಿತು. ಈ ವರದಿಯು ಉಭಯ ದೇಶಗಳ ಪ್ರಸ್ತುತ ವಹಿವಾಟು ವ್ಯಾಪ್ತಿ, ಬೆಳವಣಿಗೆಯ ಕ್ರಮ ಹಾಗೂ ಪಾಲುದಾರರಿಗೆ ಭವಿಷ್ಯದ ಮಾರ್ಗ ಕುರಿತು ಮಾಹಿತಿಗಳನ್ನು ಒಳಗೊಂಡಿದೆ.
ಐಎಸಿಸಿಯ ಒಂದು ಪ್ರಮುಖವಾದ ಕಾರ್ಯಕ್ರಮ ಎಂದು ಬಣ್ಣಿಸಲಾದ ಸಮಾವೇಶದಲ್ಲಿ ಮೇಕ್ ಇನ್ ಇಂಡಿಯಾ, ಆರೋಗ್ಯ ಮತ್ತು ಔಷದ ಕ್ಷೇತ್ರ, ವಿಮಾನಯಾನ ರಕ್ಷಣೆ, ಇ-ಕಾಮರ್ಸ್ ಮತ್ತು ಸ್ಮಾರ್ಟ್ ಸಿಟಿ ಕುರಿತ ಕಲ್ಪನೆಯನ್ನು ಒಳಗೊಂಡಿದೆ. 2020ರ ವೇಳೆಗೆ ಉಭಯ ರಾಷ್ಟ್ರಗಳ ನಡುವೆ ವಹಿವಾಟಿನ ಮೊತ್ತವನ್ನು 500 ಬಿಲಿಯನ್ ಡಾಲರ್‍ಗೆ ಹೆಚ್ಚಿಸುವ ಗುರಿ ಸಾಧನೆಯ ನಿಟ್ಟಿನಲ್ಲಿ ಸಮಾವೇಶದಲ್ಲಿ ವ್ಯಕ್ತವಾಗುವ ಚರ್ಚೆ, ಸಲಹೆಗಳನ್ನು ಉಭಯ ರಾಷ್ಟ್ರಗಳ ಸರ್ಕಾರಗಳಿಗೆ ನೀಡಲಾಗುವುದು.