ನೋಯ್ಡಾ: ವಿಶ್ವದಲ್ಲಿಯೇ ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಘೋಷಿಸಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರಿಂಗಿಂಗ್ ಬೆಲ್ ಸಂಸ್ಥೆ ಗ್ರಾಹಕರಿಗೆ ಪ್ರೀಡಂ-251 ಮೊಬೈಲ್ ತಲುಪಿಸುವ ಮೊದಲೇ ನಷ್ಟದಲ್ಲಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ ಈ ಸಂಬಂಧ ಕೇಂದ್ರ ಸರ್ಕಾರದಿಂದ ಸಹಾಯ ಕೇಳಿದೆ.
ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ಸ್ವೀಕರಿಸಲು ಗ್ರಾಹಕರು ಕಾತರದಿಂದ ಕಾಯುತ್ತಿದ್ದು, ನಾಳೆಯಿಂದ ಮೊಬೈಲ್ ವಿತರಿಸುವುದಾಗಿ ನೋಯ್ಡಾ ಮೂಲಕ ನಿರ್ಮಾಪಕರು ಹೇಳಿದ್ದಾರೆ.
ಈ ಮಧ್ಯೆ, ರಿಂಗಿಂಗ್ ಬೆಲ್ ಸಂಸ್ಥೆಯ ಸಿಇಒ ಮೊಹಿತ್ ಗೋಯಲ್ ಅವರು, ತೈವಾನ್ ನಿಂದ ಆಮದು ಮಾಡಿಕೊಳ್ಳುವ ಪ್ರತಿ ಮೊಬೈಲ್ ಗೆ 1,180 ರುಪಾಯಿ ವೆಚ್ಚವಾಗುತ್ತಿದ್ದು, ಆ ಪೈಕಿ 251 ರುಪಾಯಿ ಗ್ರಾಹಕರಿಂದ ಹಾಗೂ 700-800 ರುಪಾಯಿ ಆಪ್ ಡೆವೆಲಪರ್ಸ್ ಗಳಿಂದ ಮತ್ತು ರಿಂಗಿಂಗ್ ಬೆಲ್ ವೆಬ್ ಸೈಟ್ ನ ಜಾಹೀರಾತಿನಿಂದ ಸಂಗ್ರಹಿಸಿದರೂ ಒಂದು ಮೊಬೈಲ್ ಗೆ 180ರಿಂದ -270 ರುಪಾಯಿ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
'ಪ್ರೀಡಂ 251' ಮೊಬೈಲ್ ನ ಮೊದಲ ಕಂತಿನ 500 ಮೊಬೈಲ್ ಗಳನ್ನು ಜುಲೈ 8ರಿಂದ ಡೆಲಿವೆರಿ ಮಾಡಲಾಗುತ್ತಿದ್ದು, ಗ್ರಾಹಕರು 40 ರುಪಾಯಿ ಡೆಲಿವೆರಿ ವೆಚ್ಚ ಸೇರಿದಂತೆ 291 ರುಪಾಯಿ ನೀಡಿ ಮೊಬೈಲ್ ಪಡೆದುಕೊಳ್ಳಬಹುದಾಗಿ ಎಂದು ಗೋಯಲ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ನಮಗೆ ಸಹಾಯ ಮಾಡಿದೆ ನಾವು ಪ್ರತಿ ಭಾರತೀಯರ ಕೈಗೂ ಸ್ಮಾರ್ಟ್ ಫೋನ್ ನೀಡುವ ಮೂಲಕ ಡಿಜಿಟಲ್ ಅಧಿಕಾರ ನೀಡುತ್ತೇವೆ ಎಂದಿದ್ದಾರೆ.
ಈ ಸಂಬಂಧ ಜೂನ್ 28ರಂದು ರಿಂಗಿಂಗ್ ಬೆಲ್ ಸಂಸ್ಥೆ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದು, ನರೇಂದ್ರ ಮೋದಿ ಅವರ ಭೇಟಿಗೆ ಸಮಯಾವಕಾಶ ಕೋರಿದೆ.