ನೋಯ್ಡಾ: ವಿಶ್ವದಲ್ಲಿಯೇ ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಘೋಷಿಸಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರಿಂಗಿಂಗ್ ಬೆಲ್ ಸಂಸ್ಥೆ ಕಡೆಗೂ 251 ರುಪಾಯಿಗೆ ಪ್ರೀಡಂ-251 ಸ್ಮಾರ್ಟ್‌ಪೋನ್ ಅನ್ನು ಜುಲೈ 6ರಿಂದ ಗ್ರಾಹಕರಿಗೆ ನೀಡುವುದಾಗಿ ಬುಧವಾರ ಹೇಳಿದೆ. ಈ ಮುಂಚೆ ಜೂನ್ 30ರಿಂದ ಗ್ರಾಹಕರಿಗೆ ತಲುಪಿಸುವುದಾಗಿ ಹೇಳಿತ್ತು.
ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮೇಕ್ ಇನ್ ಇಂಡಿಯಾದಡಿ ವಿಶ್ವದ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ತಯಾರಿಸಲು ಅವಕಾಶ ನೀಡುವಂತೆ ಕೇಳಲು ಯತ್ನಿಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಪ್ರಧಾನಿ ಭೇಟಿಗೆ ಅವಕಾಶ ಕೋರಿ ನಾವು ಪತ್ರ ಬರೆಯುತ್ತಿದ್ದೇವೆ ಎಂದು ರಿಂಗಿಂಗ್ ಬೆಲ್ ಸಂಸ್ಥಾಪಕ ಹಾಗೂ ಸಿಇಒ ಮೊಹಿತ್ ಗೋಯಲ್ ಅವರು ತಿಳಿಸಿದ್ದಾರೆ.
ನಾವು ಈಗಾಗಲೇ ಸುಮಾರು 2 ಲಕ್ಷ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಿದ್ದು, ಜುಲೈ 6ರಿಂದ ಅವುಗಳನ್ನು ಗ್ರಾಹಕರಿಗೆ ತಲುಪಿಸಲಾಗುವುದು. ಮೊಬೈಲ್ ಡೆಲಿವೆರಿ ಆರಂಭವಾದ ನಂತರ ಜುಲೈ 7ರಂದು ದೆಹಲಿಯಲ್ಲಿ ಪ್ರೀಡಂ 251 ಮೊಬೈಲ್ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಹೊಂದಿದ್ದೇವೆ ಎಂದು ಗೋಯಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.