ಮುಂಬೈ: ವಿಶ್ವ ಮಾರುಕಟ್ಟೆಯ ಪರಿಣಾಮಗಳು ಭಾರತೀಯ ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕವಾಗಿದ್ದು, ಸತತ ನಾಲ್ಕನೇ ದಿನ ಸೆನ್ಸೆಕ್ಸ್ ಏರಿಕೆಯತ್ತ ಸಾಗಿದೆ.
ಶುಕ್ರವಾರ ದಿನದ ವಹಿವಾಟು ಆರಂಭಿಸಿದ ಭಾರತೀಯ ಷೇರುಮಾರುಕಟ್ಟೆ ಆರಂಭಿಕ ಒಂದು ಗಂಟೆಯ ಅವಧಿಯಲ್ಲಿಯೇ 100 ಅಂಕಗಳ ಏರಿಕೆ ಕಂಡಿದೆ. ನಿನ್ನೆ 364 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಷೇರುಮಾರುಕಟ್ಟೆ ಇಂದು ಮತ್ತೆ 100 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಆ ಮೂಲಕ ಬಿಎಸ್ ಇ ಸೆನ್ಸೆಕ್ಸ್ 24, 625.76ಕ್ಕೇರಿದೆ. ಇನ್ನು ನಿಫ್ಟಿ ಏರಿಕೆ ಕಾಣುವ ಮೂಲಕ 7, 478.30 ಅಂಕಗಳಿಗೇರಿದೆ.
ಉಕ್ಕು ವಲಯದ ಷೇರುಗಳಿಗೆ ಬೇಡಿಕೆ ಕಂಡುಬಂದಿದ್ದು, ಬ್ಯಾಂಕಿಂಗ್ ಮತ್ತು ರಿಯಾಲಿಟಿ ಕ್ಷೇತ್ರಗಳ ಷೇರುಗಳು ಏರುಗತಿಯತ್ತ ಸಾಗಿವೆ.
ಮತ್ತೆ ಏರಿಕೆ ಕಂಡ ರುಪಾಯಿ ಮೌಲ್ಯ
ಷೇರುಮಾರುಕಟ್ಟೆ ಏರಿಕೆಯಾಗುತ್ತಿದ್ದಂತೆಯೇ ಸತತ ಮೂರನೇ ದಿನವೂ ರುಪಾಯಿ ಮೌಲ್ಯ ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ 67.23ನಷ್ಟು ಚೇತರಿಕೆ ಕಂಡಿದೆ. ಅಮೆರಿಕ ಫೆಡರಲ್ ಬ್ಯಾಂಕ್ ಗಳು ಬಡ್ಡಿ ದರ ಏರಿಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇತ್ತ ಆರ್ ಬಿಐ ಕೂಡ ಬಡ್ಡಿದರ ಇಳಿಕೆ ಮಾಡುವ ವಿಶ್ವಾಸ ಇರುವ ಹಿನ್ನಲೆಯಲ್ಲಿ ರುಪಾಯಿ ಮೌಲ್ಯ ಚೇತರಿಕೆ ಕಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.