ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡೆ
ವಾಷಿಂಗ್ಟನ್: ಪುರುಷರಂತೆ ಮಹಿಳೆಯರೂ ಕೂಡ ಕೆಲಸದಲ್ಲಿ ತೊಡಗಿದರೆ ಭಾರತದ ರಾಷ್ಟ್ರೀಯ ಆದಾಯ ಶೇಕಡಾ 27ರಷ್ಟು ಹೆಚ್ಚಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡೆ ತಿಳಿಸಿದ್ದಾರೆ.
ಮಹಿಳೆಯರ ಸಬಲೀಕರಣ: ಒಂದು ಆರ್ಥಿಕ ಬದಲಾವಣೆಯ ಆಟ ಕುರಿತು ಲಾಸ್ ಏಂಜಲೀಸ್ ನಲ್ಲಿ ನಡೆದ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗೂ ಸಮಾನ ವೇತನ ಮತ್ತು ಉತ್ತಮ ಆರ್ಥಿಕಾವಕಾಶಗಳು ಸಿಕ್ಕಿದರೆ ದೇಶದ ಆರ್ಥಿಕತೆ ಅಭಿವೃದ್ಧಿಯಾಗುವುದು ಮತ್ತು ಸಂಪತ್ತು ಹಂಚಿಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ಸಬಲೀಕರಣ ಆರ್ಥಿಕ ಬದಲಾವಣೆಗೆ ದಾರಿಯಾಗಿದೆ. ಉದಾಹರಣೆಗೆ ಕೂಲಿ ಕೆಲಸದಲ್ಲಿ ಪುರುಷರಿಗೆ ಸಮನಾಗಿ ಮಹಿಳೆಯರು ದುಡಿದಾಗ ಅವರಿಗೆ ಸಮಾನ ವೇತನ ಸಿಕ್ಕಿದರೆ ರಾಷ್ಟ್ರದ ಆದಾಯ ಅಮೆರಿಕಾದಲ್ಲಿ ಶೇಕಡಾ 5ರಷ್ಟು, ಜಪಾನ್ ನಲ್ಲಿ ಶೇಕಡಾ 9ರಷ್ಟು, ಭಾರತದಲ್ಲಿ ಶೇಕಡಾ 27ರಷ್ಟು ವೃದ್ಧಿಯಾಗಬಹುದು ಎಂದು ಅವರು ಹೇಳಿದರು.
ವಿಶ್ವದಾದ್ಯಂತ ಮಹಿಳೆಯರು ಮೂರು ಪಟ್ಟು ಅನನುಕೂಲತೆಗಳನ್ನು ಹೊಂದಿದ್ದು ವೇತನದ ವಿಚಾರದಲ್ಲಿ ಮಹಿಳೆ ಮತ್ತು ಪುರುಷರ ಮಧ್ಯೆ ವ್ಯತ್ಯಾಸ ಇಂದಿಗೂ ಇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಮಕ್ಕಳ ಆರೈಕೆ, ರಜೆಯ ಸೌಲಭ್ಯ, ಕೆಲಸದ ಸಮಯದಲ್ಲಿ ಸಡಿಲಿಕೆಯಿರಬೇಕು. ಹಣಕಾಸಿನ ವಿಚಾರದಲ್ಲಿ ಮಹಿಳೆಯರಿಗೆ ಸ್ವತಂತ್ರವಿರಬೇಕು ಮತ್ತು ಹಲವು ದೇಶಗಳಲ್ಲಿರುವ ಕಾನೂನು ತೊಡಕುಗಳನ್ನು ತೊಡೆದುಹಾಕಬೇಕು ಎಂದು ಲಗಾರ್ಡೆ ಹೇಳಿದರು.