ಮತ್ತೆ ಕುಸಿದ ಸೆನ್ಸೆಕ್ಸ್; 300 ಅಂಕಗಳ ಕಡಿತ, ನಿಫ್ಚಿ ಕೂಡ ಕುಸಿತ
ದಿನದ ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ 300 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ ಕೂಡ 8200 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ.
ಮುಂಬೈ: ದಿನದ ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ 300 ಅಂಕಗಳಷ್ಟು ಕುಸಿದಿದ್ದು, ನಿಫ್ಟಿ ಕೂಡ 8200 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ.
ನೋಟು ನಿಷೇಧದ ಬಳಿಕ ಉಂಟಾಗಿರುವ ಪರಿಸ್ಥಿತಿ ಹಿನ್ನಲೆಯಲ್ಲಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದೇ ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 300 ಅಂಕಗಳನ್ನು ಕಳೆದುಕೊಳ್ಳುವ ಮೂಲಕ 26,474.55 ಅಂಕಗಳಿಗೆ ಇಳಿದಿದ್ದರೆ, ನಿಫ್ಟಿ ಕೂಡ 76.90 ಅಂಕ ಕುಸಿತದೊಂದಿಗೆ 8219.40 ಅಂಕಗಳೊಂದಿಗೆ ವಹಿವಾಟು ನಡೆಸುತ್ತಿದೆ.
ಕುಸಿತದಿಂದಾಗ ಬ್ಯಾಂಕ್ ಆಫ್ ಬರೋಡಾ ಷೇರುಗಳ ಮೌಲ್ಯದಲ್ಲಿ ಶೇ.6 ರಷ್ಟು ಕುಸಿತವಾಗಿದ್ದು, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯ ಕೂಡ ಶೇ. 0.18ರಷ್ಟು ಕುಸಿತಗೊಂಡಿವೆ. ಇನ್ನು ಆಟೋ ಮೊಬೈಲ್ ಕ್ಷೇತ್ರದಲ್ಲಿ ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿದೆ. ಭಾರತೀಯ ಹೂಡಿಕೆದಾರರ ಮಾರಾಟ ಪರಿಸ್ಥಿತಿ ಮುಂದುವರೆದರೆ ಷೇರುಮಾರುಕಟ್ಟೆ ಮತ್ತಷ್ಟು ಅಂಕಗಳ ಕುಸಿತ ಕಾಣಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಂತೆಯೇ ಪ್ರಸ್ತುತ ಭಾರತದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ತಹಬದಿಗೆ ಬರುವವರೆಗೂ ಭಾರತೀಯ ಷೇರುಮಾರುಕಟ್ಟೆ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಬಹುದು ಎಂದು ಹೇಳಲಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.