ವಾಣಿಜ್ಯ

ನೋಟು ನಿಷೇಧ ಎಫೆಕ್ಟ್; ಎಫ್ ಡಿ ಬಡ್ಡಿ ದರ ಕಡಿತ!

Srinivasamurthy VN

ನವದೆಹಲಿ: 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಸರ್ಕಾರದ ಕ್ರಮದಿಂದಾಗಿ ದೇಶದ ಪ್ರಮುಖ ಬ್ಯಾಂಕುಗಳಿಗೆ ಭಾರಿ ಪ್ರಮಾಣದಲ್ಲಿ ಠೇವಣಿಗಳು ಹರಿದುಬರುತ್ತಿದ್ದು, ಇದರ ಪರಿಣಾಮ ಸ್ಥಿರ ಠೇವಣಿ  (ಫಿಕ್ಸೆಡ್ ಡೆಪಾಸಿಟ್-ಎಫ್ ಡಿ) ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.

ಇದರ ಮೊದಲ ಹಂತವಾಗಿ ಈಗಾಗಲೇ ದೇಶದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಆಯ್ದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಶೇ.0.15ರಷ್ಟು ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ.  ಪ್ರಮುಖವಾಗಿ ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರ ಘೋಷಣೆ ಮಾಡಿದ ಬಳಿಕ ಎಸ್ ಬಿಐ ಈ ವರೆಗೂ ಸುಮಾರು 80 ಸಾವಿರ ಕೋಟಿಗೂ ಅಧಿಕ ಠೇವಣಿ ಹರಿದುಬಂದಿದ್ದು, ಗ್ರಾಹಕರು ತಮ್ಮ ಬಳಿ ಇರುವ ಹಳೆಯ 500  ಮತ್ತು 1000 ನೋಟುಗಳನ್ನು ಠೇವಣಿ ಮಾಡಲು ಮುಗಿಬಿದ್ದಿದ್ದಾರೆ.

ಹೀಗಾಗಿ ಬ್ಯಾಂಕುಗಳಿಗೆ ಅಪಾರ ಪ್ರಮಾಣದ ಹಣ ಹರಿದು ಬರುತ್ತಿದ್ದು, ಇದೇ ಕಾರಣಕ್ಕೆ ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಲು ಬ್ಯಾಂಕುಗಳು ನಿರ್ಧರಿಸಿವೆ ಎಂದು ಹೇಳಲಾಗುತ್ತಿದೆ. ಇದೇ ಡಿಸೆಂಬರ್ 7ರಂದು  ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಧ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದ್ದು, ಈ ವೇಳೆ ಸ್ಥಿರ ಠೇವಣಿ ಮತ್ತು ಇತರೆ ಬಡ್ಡಿದರಗಳನ್ನು ಕಡಿತಗೊಳಿಸುವ ಕುರಿತು ಘೋಷಣೆ ಹೊರಹಾಕುವ ಸಾಧ್ಯತೆ ಇದೆ ಆರ್ಥಿಕ ವಿಶ್ಲೇಷಕರು  ಅಭಿಪ್ರಾಯಪಟ್ಟಿದ್ದಾರೆ.

ಎಸ್ ಬಿಐ ಸ್ಥಿರ ಠೇವಣಿ ಬಡ್ಡಿದರ ಕಡಿತ
ಇನ್ನು ನೋಟು ನಿಷೇಧ ಬಳಿಕ ಇದೇ ಮೊದಲ ಬಾರಿಗೆ ಎಸ್ ಬಿಐ ತನ್ನ ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದ್ದು, ಆಯ್ದ ಸ್ಥಿರ ಠೇವಣಿ ಮೇಲಿನ ಬಡ್ಡಿದರ ಕಡಿತಗೊಳಿಸಿದೆ. 1 ವರ್ಷದಿಂದ 455 ದಿನಗಳವರೆಗಿನ ಸ್ಥಿರ  ಠೇವಣಿ ಮೇಲಿನ ಬಡ್ಡಿ ದರದಲ್ಲಿ ಶೇ.0.15ರಷ್ಟು ಕಡಿತಗೊಳಿಸಿದೆ. ಇಂದಿನಿಂದಲೂ ನೂತನ ಬಡ್ಡಿದರ ಜಾರಿಯಾಗಲಿದೆ ಎಂದು ಎಸ್ ಬಿಐ ಹೇಳಿದೆ. ಇನ್ನುಳಿದಂತೆ 2-3 ವರ್ಷಗಳ ಅವಧಿಯ ಎಫ್ ಡಿ ಬಡ್ಡಿದರದಲ್ಲಿ ಯಾವುದೇ  ರೀತಿಯ ಬದಲಾವಣೆ ಇಲ್ಲ ಎಂದು ಎಸ್ ಬಿಐ ಸ್ಪಷ್ಟಪಡಿಸಿದೆ.

SCROLL FOR NEXT