ಮುಂಬೈ: ಟಾಟಾ-ಮಿಸ್ಟ್ರಿ ಮಂಡಳಿ ಪುರಾಣ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಪರಸ್ಪರ ಕೆಸರೆರಚಾಟದಲ್ಲಿ ಇಬ್ಬರೂ ತೊಡಗಿದ್ದಾರೆ. ಸೈರಸ್ ಮಿಸ್ಟ್ರಿಯವರು ಕಂಪೆನಿಗೆ ಸಾಕಷ್ಟು ಕೆಟ್ಟ ಹೆಸರು ತಂದಿದ್ದಾರೆ, ಅವರನ್ನು ಟಾಟಾ ಸನ್ಸ್ ನಿರ್ದೇಶಕರ ಮಂಡಳಿ ಸ್ಥಾನದಿಂದಲೂ ತೆಗೆದುಹಾಕಬೇಕೆಂದು ಕಂಪೆನಿ ಮೊನ್ನೆ ಹೇಳಿಕೆ ಬಿಡುಗಡೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ನಿನ್ನೆ ಸೈರಸ್ ಮಿಸ್ಟ್ರಿ ಟಾಟಾ ಸನ್ಸ್ ಮತ್ತು ಕಂಪೆನಿಯ ಮುಖ್ಯಸ್ಛ ರತನ್ ಟಾಟಾ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಐದು ಪುಟಗಳ ಕಾಗದದಲ್ಲಿ ತಮ್ಮ ವಿರುದ್ಧ ಕಂಪೆನಿ ಮಾಡಿರುವ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ. ಅಲ್ಲದೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಮತ್ತು ಜಾಗ್ವಾರ್ ಲ್ಯಾಂಡ್ ರೊವರ್ ಕಂಪೆನಿಗಳನ್ನು ರತನ್ ಟಾಟಾ ಅವರು ಐಟಿ ಸಂಸ್ಥೆ ಐಬಿಎಂಗೆ ಮಾರಾಟ ಮಾಡಲು ನೋಡಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.
ರತನ್ ಟಾಟಾ ಅವರ ಅಹಂಭಾವ ಅವರನ್ನು ಸ್ಟೀಲ್ ಕಂಪೆನಿ ಕೋರಸ್ ನ್ನು ದುಪ್ಪಟ್ಟು ಬೆಲೆಗೆ ಖರೀದಿಸಿದ್ದು ಸೇರಿದಂತೆ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿತು ಎಂದು ಮಿಸ್ಟ್ರಿ ಹೇಳಿದ್ದಾರೆ.
ಟಿಸಿಎಸ್ ಮತ್ತು ಜೆಎಲ್ ಆರ್ ಕಂಪೆನಿಗಳ ಬಗ್ಗೆ ಗಮನ ನೀಡುತ್ತಿದ್ದ ಸೈರಸ್ ಮಿಸ್ಟ್ರಿ ಕಂಪೆನಿಗಳ ಶೇಕಡಾ 90 ಲಾಭಾಂಶಗಳಿಗೆ ಕಾರಣರಾಗಿದ್ದರು. ಆದರೆ ಅವುಗಳನ್ನು ತಮ್ಮ ಒಣ ಪ್ರತಿಷ್ಠೆಗಾಗಿ ಮಾರಾಟ ಮಾಡಲು ಮುಂದಾಗಿದ್ದರು. ರತನ್ ಟಾಟಾ ಅವರು ಆ ಸಮಯದಲ್ಲಿ ಟಾಟಾ ಇಂಡಸ್ಟ್ರೀಸ್ ನ ಜಂಟಿ ಕಾರ್ಯಾಚರಣೆಯನ್ನು ಐಬಿಎಂ ಜೊತೆ ನಡೆಸುತ್ತಿದ್ದರು. ಆಗ ಐಬಿಎಂ ಸಂಸ್ಥೆ ಟಿಸಿಎಸ್ ನ್ನು ಕೊಳ್ಳಲು ಪ್ರಸ್ತಾವನೆ ಮುಂದಿಟ್ಟಿತ್ತು. ಆಗ ಜೆಆರ್ ಡಿ ಟಾಟಾ ಅವರು ಪ್ರಸ್ತಾವನೆಯನ್ನು ಚರ್ಚಿಸಲು ಒಪ್ಪಲಿಲ್ಲ. ಯಾಕೆಂದರೆ ಕೊಹ್ಲಿ ಆಗಿನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಿಂದ ಹೊರಬಂದ ನಂತರ ಕೊಹ್ಲಿ ಈ ಒಪ್ಪಂದವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಟಿಸಿಎಸ್ ಗೆ ತುಂಬಾ ಉತ್ತಮ ಭವಿಷ್ಯವಿದ್ದು, ಕಂಪೆನಿಯನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದರು ಎಂದು ಮಿಸ್ಟ್ರಿ ಪತ್ರದಲ್ಲಿ ವಿವರಿಸಿದ್ದಾರೆ.
ಆದರೆ ರತನ್ ಟಾಟಾ ಅವರ ಕೈಯಲ್ಲಿ ಟಿಸಿಎಸ್ ಕಂಪೆನಿ ನಲುಗಿ ಹೋಯಿತು. 1992ರಲ್ಲಿ ಟಿಸಿಎಸ್ ಮತ್ತು ಐಬಿಎಂ ಕಂಪೆನಿಗಳ ಮಧ್ಯೆ ಜಂಟಿ ಕಾರ್ಯಾಚರಣೆ ಒಪ್ಪಂದ ಏರ್ಪಟ್ಟಿತು. ಕೊನೆಗೆ 1999ರಲ್ಲಿ ಬೇರೆ ಬೇರೆಯಾದವು. 1968ರಲ್ಲಿ ಸ್ಥಾಪನೆಯಾದ ಟಿಸಿಎಸ್ ಕಂಪೆನಿ 2004ರಲ್ಲಿ ಸಾರ್ವಜನಿಕವಾಯಿತು.
ರತನ್ ಟಾಟಾ ಅವರನ್ನು ಅಹಂನ ವ್ಯಕ್ತಿ ಎಂದು ಕರೆದಿರುವ ಸೈರಸ್ ಮಿಸ್ಟ್ರಿ ಪತ್ರದಲ್ಲಿ ಒಬ್ಬ ಮನುಷ್ಯನ ಅಹಂ ವರ್ಸಸ್ ಒಂದು ಸಂಸ್ಛೆ'' ಎಂದು ವ್ಯಾಖ್ಯಾನಿಸಿದ್ದಾರೆ. ಬ್ರಿಟನ್ ನ ಸ್ಟೀಲ್ ತಯಾರಕ ಕಂಪೆನಿ ಕೊರಸ್ ನ್ನು ದುಬಾರಿ ಬೆಲೆಗೆ ಖರೀದಿಸಿದ್ದು, ಸಿಡಿಎಂಎ ತಂತ್ರಜ್ಞಾನಕ್ಕೆ ಕಟ್ಟುಬಿದ್ದದ್ದು ಮೊದಲಾದವು ಅವರ ತಪ್ಪು ನಿರ್ಧಾರಗಳು. ಅದು ಹಲವು ಉದ್ಯೋಗದ ವಿಪತ್ತಿಗೆ ದಾರಿ ಮಾಡಿಕೊಟ್ಟಿತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.