ನವದೆಹಲಿ: ನಿಷೇಧಗೊಂಡ 500 ಮತ್ತು 1000 ಮುಖಬೆಲೆಯ ಹಳೆ ನೋಟುಗಳನ್ನು ಇನ್ನು ಮುಂದೆ ರಿಸರ್ವ್ ಬ್ಯಾಂಕ್ ಕೌಂಟರ್ ಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಸೌಲಭ್ಯ ನಿನ್ನೆಗೆ ಮುಗಿದಿದ್ದು, ಗ್ರಾಹಕರು ಇನ್ನು ಮುಂದೆ ಬ್ಯಾಂಕಿನಲ್ಲಿ ಹಣವನ್ನು ಖಾತೆಗಳಲ್ಲಿ ಕೇವಲ ಠೇವಣಿ ಇಡಬಹುದಾಗಿದೆ.
ಇನ್ನು ಮುಂದೆ ಯಾರಾದರೂ ನೋಟು ವಿನಿಮಯ ಮಾಡಿಕೊಳ್ಳಬೇಕೆಂದರೆ ರಿಸರ್ವ್ ಬ್ಯಾಂಕ್ ಕೌಂಟರ್ ಗೆ ಹೋಗಬೇಕು ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿದ್ದು ಒಬ್ಬ ವ್ಯಕ್ತಿ ದಿನಕ್ಕೆ 2 ಸಾವಿರದವರೆಗೆ ಮಾತ್ರ ವಿನಿಮಯ ಮಾಡಿಕೊಳ್ಳಬಹುದು. ಈ ಮಧ್ಯೆ ಕೆಲವು ಮಾರ್ಪಾಡುಗಳೊಂದಿಗೆ ಹಳೆ 500 ಮತ್ತು 1000ದ ನೋಟುಗಳ ಬಳಕೆ ಅವಧಿಯನ್ನು ಆಯ್ದ ಸ್ಥಳಗಳಲ್ಲಿ ಡಿಸೆಂಬರ್ 15ರವರೆಗೆ ಬಳಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.
ನಿನ್ನೆ ಈ ಕುರಿತು ಹೇಳಿಕೆ ಹೊರಡಿಸಿದ್ದ ಕೇಂದ್ರ ಸರ್ಕಾರ, ಹಳೆ ನೋಟುಗಳ ವಿನಿಮಯ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಬ್ಯಾಂಕುಗಳಲ್ಲಿ ನೋಟುಗಳ ವಿನಿಮಯ ಮಾಡಿಕೊಳ್ಳುವ ಅವಧಿ ಮುಗಿದಿದ್ದರೂ ಕೂಡ ಹಳೆ ನೋಟುಗಳನ್ನು ಠೇವಣಿ ಇಡಬಹುದು. ಇದರಿಂದ ಬ್ಯಾಂಕುಗಳಲ್ಲಿ ಇನ್ನೂ ಖಾತೆಯಿಲ್ಲದಿರುವವರು ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿದೆ.