ನವದೆಹಲಿ: ಭದ್ರತಾ ಲೋಪದ ಹಿನ್ನಲೆಯಲ್ಲಿ ಖ್ಯಾತ ರಾಷ್ಟ್ರೀಯ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸುಮಾರು 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗನ್ನು ಸ್ಥಗಿತಗೊಳಿಸಲು ಮುಂದಾಗಿದೆ.
ಮಾಲ್ ವೇರ್ ಸಂಬಂಧಿತ ಸಮಸ್ಯೆಯಿಂದಾಗಿ 6 ಲಕ್ಷ ಕಾರ್ಡ್ ಗಳನ್ನು ಬ್ಲಾಕ್ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಕಾರ್ಡ್ ಸ್ಥಗಿತಗೊಂಡ ಎಲ್ಲ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್ ಗಳನ್ನು ವಿತರಿಸುವುದಾಗಿ ಎಸ್ ಬಿಐ ಹೇಳಿದೆ. ದೇಶದ ಬ್ಯಾಕಿಂಗ್ ಇತಿಹಾಸದಲ್ಲಿಯೇ ಬ್ಯಾಂಕ್ ವೊಂದು ಇಷ್ಟು ಪ್ರಮಾಣಜ ಕಾರ್ಡ್ ಗಳನ್ನು ಬ್ಲಾಕ್ ಮಾಡುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಎಸ್ ಬಿಐ ಎಟಿಎಂ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ. ಆದರೆ ಗ್ರಾಹಕರು ಬೇರೆ ಬೇರೆ ಕೇಂದ್ರಗಳಲ್ಲಿ ಕಾರ್ಡ್ ಬಳಕೆ ಮಾಡಿರುವದರಿಂದ ಡೆಬಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಡ್ ಬ್ಲಾಕ್ ಆಗಿದ್ದರೆ ಗ್ರಾಹಕರು ಆತಂಕ ಪಡುವ ಆಗತ್ಯವಿಲ್ಲ. ಕೂಡಲೇ ಸಮೀಪದ ಎಸ್ ಬಿಐ ಶಾಖೆಗಳನ್ನು ಸಂಪರ್ಕಿಸಿ ಹೊಸ ಕಾರ್ಡ್ ಪಡೆಯಬಹುದಾಗಿದೆ. ಅಥವಾ ಆನ್ ಲೈನ್ ಮೂಲಕವೂ ಹೊಸ ಕಾರ್ಡ್ ಗೆ ಮನವಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಈಗಾಗಲೇ ಎಲ್ಲ ರಾಜ್ಯಗಳ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಸ್ ಬಿಐ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.