ನವದೆಹಲಿ: ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಇತರೆ ಟೆಲಿಕಾಂ ಸಂಸ್ಥೆಗಳು ಮುಂದಾಗಿರುವಂತೆಯೇ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ಘೋಷಿಸುತ್ತಿದೆ.
ಈ ಹಿಂದೆ 1, 199 ರು.ಗಳ ಬಿಬಿಜಿ ಕಾಂಬೋ ಪ್ಲಾನ್ ಘೋಷಣೆ ಮಾಡಿದ್ದ ಬಿಎಸ್ಎನ್ಎಲ್ ಇದೀಗ ತನ್ನ ಉಚಿತ ಕರೆಗಳ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಜಿಯೋ ನೆಟ್ವರ್ಕ್ ನಲ್ಲಿ 4ಜಿ ಗ್ರಾಹಕರಿಗೆ ಮಾತ್ರ ಉಚಿತ ಕರೆ ಸೌಲಭ್ಯವಿದ್ದರೆ, ಬಿಎಸ್ಎನ್ಎಲ್ ನ ನೂತನ ಯೋಜನೆ ಅನ್ವಯ ಈ ಹೊಸ ಸೌಲಭ್ಯ 4 ಜಿ ಗ್ರಾಹಕರ ಜತೆಗೆ 2ಜಿ ಹಾಗೂ 3ಜಿ ಬಳಕೆದಾರರಿಗೂ ಲಭ್ಯವಾಗಲಿದೆ.
ಆದರೆ ಈ ಸೌಲಭ್ಯ ಬಿಎಸ್‌ಎನ್‌ಎಲ್ ಮೊಬೈಲ್ ಬ್ರಾಡ್‌ಬ್ಯಾಂಡ್ ಹೊಂದಿದವರಿಗೆ ಮಾತ್ರ ದೊರೆಯಲಿದೆ. ಜನರು ತಮ್ಮ ದಿನದ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುವುದರಿಂದ ಈ ಯೋಜನೆ ಉಪಯುಕ್ತವಾಗುತ್ತದೆ ಎಂಬುದು ಸಂಸ್ಥೆಯ ಹೇಳಿಕೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್ ಎನ್ ಎಲ್ ನ ಚೇರ್ಮನ್ ಹಾಗೂ ಎಂಡಿ ಅನುಪಮ್ ಶ್ರೀವಾತ್ಸವ್ ಅವರು, "ಜಿಯೋ ನೆಟ್ವರ್ಕ್ ಘೋಷಣೆಯಾದ ಬಳಿಕ ನಾವು ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಾವು ಕೂಡ ಆಜೀವ ಪರ್ಯಂತ ಉಚಿತಕರೆ ಸೌಲಭ್ಯ ನೀಡಲು ನಿರ್ಧರಿಸಿದ್ದೇವೆ. ನೂತನ ವರ್ಷಾರಂಭದಿಂದ ಈ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಿದರು.