ಬೆಂಗಳೂರು: ಇನ್ಫೋಸಿಸ್ ನ ಸಿಇಒ ವಿಶಾಲ್ ಸಿಕಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಉರ್ಜಿತ್ ಪಟೇಲ್ ಗಿಂತ 55 ಪಟ್ಟು ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಸಂಸ್ಥೆಯ ಸಿಒಒ ಪ್ರವೀಣ್ ರಾವ್ ಅವರಿಗೆ ವೇತನ ಸೇರಿದಂತೆ ಇತರ ಭತ್ಯೆಗಳನ್ನು ಶೇ.35ಕ್ಕೆ ಅಂದರೆ ವಾರ್ಷಿಕ 12.5 ಕೋಟಿಗೆ ಏರಿಕೆ ಮಾಡಿದ್ದ ಸಂಸ್ಥಯ ನಿರ್ಧಾರದ ಬಗ್ಗೆ ಇನ್ಫೋಸಿಸ್ ನ ಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
"ಸಂಸ್ಥೆಯ ಉನ್ನತ ಸ್ಥಾನದಲ್ಲಿರುವವರ ವೇತನ ಸಹಿತ ಭತ್ಯೆಗಳನ್ನು ಶೇ.60-70 ಹೆಚ್ಚಿಸಿ, ಬಹುತೇಕ ನೌಕರರಿಗೆ ಶೇ. 6-8 ರಷ್ಟು ಹೆಚ್ಚಿಸುವುದು ಸರಿಯಲ್ಲ" ಎಂದು ನಾರಾಯಣ ಮೂರ್ತಿ ಹೇಳಿದ್ದರು. ಫೆಬ್ರವರಿಯಲ್ಲಿ ವಿಶಾಲ್ ಸಿಕ್ಕಾ ಅವರ ವೇತನ ಸಹಿತ ಇತರ ಭತ್ಯೆಗಳನ್ನು ಶೇ.55 ರಷ್ಟು ಅಂದರೆ ವಾರ್ಷಿಕವಾಗಿ $7.08 ಮಿಲಿಯನ್ ನಿಂದ $11 ಮಿಲಿಯನ್ ಡಾಲರ್ ಗೆ ಏರಿಕೆ ಮಾಡಲಾಗಿತ್ತು. ಇದು ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಗಿಂತ 55 ಪಟ್ಟು ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸಹ ಆರ್ ಬಿಐನ ಗೌರ್ನರ್ ವೇತನವನ್ನು ತಿಂಗಳಿಗೆ 90,000 ದಿಂದ 2.5 ಲಕ್ಷಕ್ಕೆ ಏರಿಕೆ ಮಾಡಿತ್ತು. ವೇತನ, ತುಟ್ಟಿಭತ್ಯೆ ಸೇರಿದಂತೆ ಒಟ್ಟಾರೆ ಆರ್ ಬಿಐ ಗೌರ್ನರ್ ತಿಂಗಳಿಗೆ 4 ಲಕ್ಷ ಪಡೆಯುತ್ತಿದ್ದು ಉರ್ಜಿತ್ ಪಟೇಲ್ ಗಿಂತ 55 ಪಟ್ಟು ಹೆಚ್ಚು ವೇತನವನ್ನು ಇನ್ಫೋಸಿಸ್ ನ ಸಿಇಒ ಪಡೆಯುತ್ತಿದ್ದಾರಂತೆ.
ವಿಶಾಲ್ ಸಿಕ್ಕಾ ಅವರ ವೇತನವನ್ನು ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡಿರುವ ಸಂಸ್ಥೆ, ಇನ್ಫೋಸ್ ನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವುದರಲ್ಲಿ ವಿಶಾಲ್ ಸಿಕ್ಕಾ ಅವರ ಗಮನ ಕೇಂದ್ರೀಕೃತವಾಗಿದ್ದು, ಒಳ್ಳೆಯ ಆಡಳಿತಕ್ಕೆ ಕಾರಣವಾಗಿದೆ ಎಂದು ಹೇಳಿದೆ.