ಬೆಂಗಳೂರು: ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವೆಗಳ ರಫ್ತುದಾರ ಸಂಸ್ಥೆ ಇನ್ಫೋಸಿಸ್ 4 ನೇ ತ್ರೈಮಾಸಿಕದಲ್ಲಿ ಅಂದಾಜಿಗಿಂತಲೂ ಹೆಚ್ಚಿನ ಲಾಭ ಗಳಿಸಿದೆ.
100 ಮಿಲಿಯನ್ ಡಾಲರ್ ಗಿಂತಲೂ ಹೆಚ್ಚು ವಿಭಾಗದಲ್ಲಿ ಸಂಸ್ಥೆ ಹೆಚ್ಚು ಗ್ರಾಹಕ ಕಂಪನಿಗಳನ್ನು ಪಡೆದಿರುವುದು ಸಂಸ್ಥೆಯ ಲಾಭ ಹೆಚ್ಚುವುದಕ್ಕೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಂಸ್ಥೆಯ ನಿವ್ವಳ ಲಾಭ ಶೇ.0.2 ರಷ್ಟು (36.03 ಬಿಲಿಯನ್ ರೂಪಾಯಿ ಅಂದರೆ 557.01 ಮಿಲಿಯನ್ ಡಾಲರ್ ಗೆ) ಏರಿಕೆಯಾಗಿದೆ. ಸಂಸ್ಥೆಯ ಆದಾಯ ಶೇ.3.4 ರಷ್ಟು ಏರಿಕೆಯಾಗಿದ್ದು, 171.20 ಬಿಲಿಯನ್ ರೂಪಾಯಿಯಷ್ಟಾಗಿದೆ.
4 ನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆಯ ಲಾಭ 35.67 ರಷ್ಟಿರಲಿದೆ ಎಂದು ವಿಶ್ಲೆಷಕರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆಗೂ ಮೀರಿ ಇನ್ಫೋಸಿಸ್ ಲಾಭ ಗಳಿಸಿದೆ. ಇತ್ತೀಚೆಗಷ್ಟೇ ಇನ್ಫೋಸಿಸ್ ನಲ್ಲಿ ಆಡಳಿತ ಮಂಡಳಿ ಮತ್ತು ಸ್ಥಾಪಕ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇದೇ ಸಂದರ್ಭದಲ್ಲಿ ಇನ್ಫೋಸಿಸ್ ಸಂಸ್ಥೆ ನಿರೀಕ್ಷೆಗೂ ಮೀರಿದ ಲಾಭ ಗಳಿಸಿರುವುದು ಮಹತ್ವ ಪಡೆದುಕೊಂಡಿದೆ.