ನವದೆಹಲಿ: ಸಿಇಒ ಇವಾನ್ ಸ್ಪೀಗೆಲ್ ಭಾರತದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಖ್ಯಾತ ಆ್ಯಪ್ ಸ್ನ್ಯಾಪ್ ಚಾಟ್ ಆ್ಯಪ್ ನ ರೇಟಿಂಗ್ಸ್ ಪಾತಾಳಕ್ಕೆ ಕುಸಿದಿದ್ದು, ಕೇವಲ ಒಂದು ಸ್ಟಾರ್ ಗೆ ರೇಟಿಂಗ್ ಕುಸಿದಿದೆ.
ನಿನ್ನೆಯಷ್ಟೇ ಅಮೆರಿಕದ ಖಾಸಗಿ ಅಂತರ್ದಜಾಲ ಸುದ್ದಿ ಪತ್ರಿಕೆಯೊಂದು 2015ರಲ್ಲಿ ಸ್ನಾಪ್ ಚಾಟ್ ಸಿಇಒ ಇವಾನ್ ಸ್ಪೀಗೆಲ್ ಅವರು ಸ್ನ್ಯಾಪ್ ಚಾಟ್ ಆ್ಯಪ್ ಶ್ರೀಮಂತರಿಗೆ ಮಾತ್ರ..ಭಾರತದಂತಹ ಬಡ ರಾಷ್ಟ್ರಗಳಿಗಲ್ಲ ಎಂದು ಹೇಳಿಕೆ ನೀಡಿದ್ದರು ಎಂದು ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸಂಸ್ಥೆ ವಿರುದ್ಧ ತಿರುಗಿ ಬಿದ್ದಿರುವ ಭಾರತೀಯ ಮೂಲದವರು ಆ್ಯಪ್ ಗೆ ನೀಡಿದ್ದ ರೇಟಿಂಗ್ಸ್ ಅನ್ನು ಕಡಿತಗೊಳಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ತಮ್ಮ ಮೊಬೈಲ್ ನಲ್ಲಿದ್ದ ಆ್ಯಪ್ ಅನ್ನು ಡಿಲೀಟ್ ಮಾಡುತ್ತಿದ್ದು, #UninstallSnapchat ಎಂಬ ಅಭಿಯಾನ ಕೂಡ ಆರಂಭಿಸಿದ್ದಾರೆ.
ಗೂಗಲ್ ಪ್ಲೇಸ್ಟೋರ್ ನೀಡಿರುವ ಅಂಕಿ ಅಂಶದಂತೆ ನಿನ್ನೆ ಸ್ನ್ಯಾಪ್ ಚಾಟ್ ಆ್ಯಪ್ ಸರಾಸರಿ ರೇಟಿಂಗ್ಸ್ 4 ಸ್ಚಾರ್ ಗಳಾಗಿತ್ತು. ಆದರೆ ನಿನ್ನೆ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ರೇಟಿಂಗ್ಸ್ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಕೇವಲ 24 ಗಂಟೆಗಳಲ್ಲಿ ಸಂಸ್ಥೆಯ ರೇಟಿಂಗ್ಸ್ ಕೇವಲ ಒಂದು ಸ್ಟಾರ್ ಗೆ ಕುಸಿದಿದೆ. ಅಂತೆಯೇ ಈ ಬಗ್ಗೆ ಸಾಮಾಜಿರ ಜಾಲತಾಣಗಳಲ್ಲೂ ವ್ಯಾಪಕ ಟೀಕೆ ಗುರಿಯಾಗುತ್ತಿದ್ದು, #UninstallSnapchat ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಇನ್ನು ಸಂಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತೀಯ ಗ್ರಾಹಕರು ಸಂಸ್ಥೆಯಿಂದ ಯಾವುದೇ ವಸ್ತುಗಳನ್ನು ಖರೀದಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಅಮೆರಿಕದ ಅಂತರ್ಜಾಲ ಸುದ್ದಿ ಪತ್ರಿಕೆಯೊಂದು ಸ್ನ್ಯಾಪ್ ಚಾಟ್ ಸಂಸ್ಥೆಯ ಸಿಇಎ ಇವಾನ್ ಸ್ಪೀಗೆಲ್ 2015ರ ಸೆಪ್ಟೆಂಬರ್ ನಲ್ಲಿ ತಮ್ಮ ಈ ಆ್ಯಪ್ ಶ್ರೀಮಂತ ರಾಷ್ಟ್ರಗಳಿಗಾಗಿ ಮಾತ್ರ, ಭಾರತ ಮತ್ತು ಸ್ಪೈನ್ ನಂತಹ ಬಡ ರಾಷ್ಟ್ರಗಳಿಗಲ್ಲ ಎಂದು ಹೇಳಿದ್ದರು ಎಂದು ಸಂಸ್ಥೆಯ ಮಾಜಿ ನೌಕರ ಹೇಳಿದ್ದಾನೆ ಎಂದು ವರದಿ ಮಾಡಿತ್ತು.