ಮುಂಬೈ: ದೇಶದಲ್ಲಿ ಕಪ್ಪು ಹಣ ಸಂಗ್ರಹಣೆಯ ಬಗ್ಗೆ ಸುಮಾರು 38,000 ಇಮೇಲ್ ಗಳು ಬಂದಿದ್ದು ಅವುಗಳಲ್ಲಿ ಶೇಕಡಾ 16ರಷ್ಟು ಮಾತ್ರ ಮುಂದಿನ ತನಿಖೆಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ನೇರ ತೆರಿಗೆ ಮಂಡಳಿ ಉತ್ತರಿಸಿದೆ.
ಮುಂಬೈಯ ಮಾಹಿತಿ ಹಕ್ಕು ಕಾರ್ಯಕರ್ತ ಜಿತೇಂದ್ರ ಘಡ್ಗೆ ಕೇಳಿದ ಪ್ರಶ್ನೆಗೆ ಮಂಡಳಿ ಉತ್ತರ ನೀಡಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಹಣಕಾಸು ಸಚಿವಾಲಯ ''blackmoneyinfo@incometax.gov.in'' ಎಂಬ ಇಮೇಲ್ ಸೃಷ್ಟಿಸಿತ್ತು. ಕಪ್ಪು ಹಣದ ಬಗ್ಗೆ ಈ ಇಮೇಲ್ ವಿಳಾಸಕ್ಕೆ 38,068 ಮೇಲ್ ಗಳು ಬಂದಿದ್ದು ಅವುಗಳಲ್ಲಿ 6,050 ಅಥವಾ ಶೇಕಡಾ 16ರಷ್ಟು ಮೇಲ್ ಗಳನ್ನು ಸಂಬಂಧಪಟ್ಟ ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕರಿಗೆ(ತನಿಖೆ) ಹೆಚ್ಚಿನ ವಿಚಾರಣೆಗೆ ಹಸ್ತಾಂತರಿಸಲಾಗಿದೆ ಎಂದು ಮೊನ್ನೆ ಏಪ್ರಿಲ್ 7ರಂದು ಉತ್ತರ ನೀಡಲಾಗಿದೆ. ಉಳಿದ 32,018 ಇಮೇಲ್ ಗಳನ್ನು ಯಾವುದೇ ಕ್ರಮ ತೆಗೆದುಕೊಳ್ಳದೆ ಮುಚ್ಚಿಹಾಕಲಾಗಿದೆ ಎಂದು ಗೊತ್ತಾಗಿದೆ.
ತಪ್ಪು ಅಥವಾ ಸುಳ್ಳು ಇಮೇಲ್ ಬಗ್ಗೆ ಘಡ್ಗೆ ಕೇಳಿದ ಪ್ರಶ್ನೆಗೆ ತನಿಖೆಯ ಹಂತದಲ್ಲಿದೆ ಎಂಬ ಉತ್ತರ ಬಂದಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಅಕ್ರಮ ಚಟುವಟಿಕೆಗಳು ಅಂದರೆ ಕಪ್ಪು ಹಣ ಸಂಗ್ರಹಣೆಯಲ್ಲಿ ತೊಡಗಿರುವವರನ್ನು ಪತ್ತೆಹಚ್ಚಲು ಇಮೇಲ್ ಆರಂಭಿಸಲಾಗುವುದು ಎಂದು ಆದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದರು.
ಶೇಕಡಾ 84ರಷ್ಟು ಇಮೇಲ್ ಗಳನ್ನು ಯಾವುದೇ ತನಿಖೆ ನಡೆಸದೆ ಮುಚ್ಚಲಾಗಿದೆ. ಇದರರ್ಥ ಹೆಚ್ಚಿನ ಇಮೇಲ್ ಗಳು ನಿಷ್ಪ್ರಯೋಜಕ, ಅಥವಾ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಅಥವಾ ಸಿಬ್ಬಂದಿ ಕೊರತೆಯಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗದಿರಬಹುದು ಎಂದು ಘಡ್ಗೆ ಹೇಳುತ್ತಾರೆ.
ಜನವರಿ 1, 2017ರ ನಂತರ ರಿಸರ್ವ್ ಬ್ಯಾಂಕಿನಲ್ಲಿ ಠೇವಣಿಯಾದ ಅನಾಣ್ಯೀಕರಣ ನೋಟುಗಳ ಸಂಖ್ಯೆ ಬಗ್ಗೆ ಕೂಡ ಘಡ್ಗೆ ಮತ್ತೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನೆ ಕೇಳಿದ್ದಾರೆ.
ಆದರೆ ರಿಸರ್ವ್ ಬ್ಯಾಂಕ್ ಮಾಹಿತಿ ಹಕ್ಕು ಕಾಯ್ದೆಯಡಿ ವಿನಾಯ್ತಿ ಕೇಳಿ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದೆ.