ವಾಣಿಜ್ಯ

ಎಸಿ ರೆಸ್ಟೊರೆಂಟ್ ಗಳಿಂದ ಪಡೆಯುವ ಆಹಾರಗಳಿಗೆ ಶೇಕಡಾ 18ರಷ್ಟು ಜಿಎಸ್ ಟಿ

Sumana Upadhyaya
ನವದೆಹಲಿ: ಹವಾ ನಿಯಂತ್ರಿತ ರೆಸ್ಟೊರೆಂಟ್ ಗಳಲ್ಲಿ ನೀಡುವ ಆಹಾರಕ್ಕೆ, ಮನೆಗೆ ಕಟ್ಟಿಕೊಂಡು ಹೋಗುವ ತಿಂಡಿ, ತಿನಿಸುಗಳು ಮತ್ತು ಹವಾ ನಿಯಂತ್ರಿತವಲ್ಲದ ಪ್ರದೇಶಗಳಿಂದ ಪೂರೈಸುವ ಆಹಾರಗಳಿಗೆ ಸಮಾನ ದರದ ಶೇಕಡಾ 18ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಹವಾ ನಿಯಂತ್ರಿತವಲ್ಲದ ರೆಸ್ಟೊರೆಂಟ್ ಗಳಲ್ಲಿ ಕೇಂದ್ರದ ಸರಕು ಮತ್ತು ಸೇವಾ ತೆರಿಗೆ ಶೇಕಡಾ 6ರಷ್ಟು, ರಾಜ್ಯದ ಜಿಎಸ್ ಟಿ ಶೇಕಡಾ 6ರಷ್ಟು ಸೇರಿ ಶೇಕಡಾ 12ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಅಬಕಾರಿ ಮತ್ತು ಸುಂಕ ತೆರಿಗೆ ಇಲಾಖೆ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದೆ. ಇದೇ ದರ ಸ್ಥಳೀಯ ರೆಸ್ಟೊರೆಂಟ್ ಗಳಿಗೂ ಅನ್ವಯವಾಗುತ್ತದೆ.
ತೆರಿಗೆ ಇಲಾಖೆ ಸಾರ್ವಜನಿಕರ ಪ್ರಶ್ನೆ, ಸಂದೇಹಗಳಿಗೆ ಉತ್ತರಿಸಿದೆ. ಬಾರ್ ಅಂಡ್ ರೆಸ್ಟೊರೆಂಟ್ ಗಳಲ್ಲಿ ಮೊದಲ ಮಹಡಿಯಲ್ಲಿ ಏರ್ ಕಂಡೀಷನ್ಡ್ ಕೊಠಡಿಗೆ ತೆರಿಗೆ ದರ ಮತ್ತು ನೆಲಮಹಡಿಯಲ್ಲಿ ಹವಾ ನಿಯಂತ್ರಿತವಲ್ಲದ ಕೊಠಡಿಗೆ ತಿಂಡಿ, ತಿನಿಸುಗಳ ಮೇಲಿನ ದರವನ್ನು ತೆರಿಗೆ ಇಲಾಖೆ ನಿಗದಿಪಡಿಸಿದೆ.
ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತರೆ ಅಲ್ಲಿ ಆಹಾರವನ್ನು ಯಾವುದೇ ಮಹಡಿಯಿಂದ ಪೂರೈಸಿದರೂ ಕೂಡ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇಂತಹ ರೆಸ್ಟೊರೆಂಟ್ ಗಳಿಂದ ಆಹಾರಗಳನ್ನು ಕಟ್ಟಿಸಿಕೊಂಡು ತೆಗೆದುಕೊಂಡು ಹೋಗುವ ಪದಾರ್ಥಗಳ ಮೇಲೆ ವಿಧಿಸುವ ಪರೋಕ್ಷ ತೆರಿಗೆ ಬಗ್ಗೆ ಸ್ಪಷ್ಟಣೆ ನೀಡಿರುವ ಇಲಾಖೆ, ಅದಕ್ಕೆ ಸಹ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗುತ್ತದೆ ಎಂದಿದೆ.
ಬಾರ್ ಅಂಡ್ ರೆಸ್ಟೊರೆಂಟ್ ಗಳಲ್ಲಿ ಮದ್ಯವನ್ನು ಪೂರೈಸುವುದರಿಂದ ಇಂತಹ ರೆಸ್ಟೊರೆಂಟ್ ಗಳು ಸಂಯೋಜಿತ ಯೋಜನೆಗಳಿಗೆ ಅರ್ಹತೆ ಹೊಂದಿರುವುದಿಲ್ಲ ಎಂದು ಕೇಂದ್ರ ಅಬಕಾರಿ ಮತ್ತು ತೆರಿಗೆ ಇಲಾಖೆ ತಿಳಿಸಿದೆ.
SCROLL FOR NEXT