ನವದೆಹಲಿ: ಇನ್ಫೋಸಿಸ್ ನ ಸ್ಥಾಪಕರಲ್ಲಿ ಒಬ್ಬರಾದ ನಂದನ್ ನೀಲೇಕಣಿ ಐಟಿ ಕ್ಷೇತ್ರಕ್ಕೆ ವಾಪಸ್ಸಾಗಲಿರುವ ಸಾಧ್ಯತೆ ಇದ್ದು, ಇನ್ಫೋಸಿಸ್ ನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ವಿಶಾಲ್ ಸಿಕ್ಕಾ ಅವರ ಹಠಾತ್ ರಾಜೀನಾಮೆಯಿಂದ ತೆರವುಗೊಂಡಿರುವ ಸ್ಥಾನಕ್ಕೆ ನಂದನ್ ನೀಲೆಕಣಿ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ಇನ್ಫೋಸಿಸ್ ನಲ್ಲಿ ನಂದನ್ ನೀಲೆಕಣಿ ಅವರು ನಿರ್ವಹಿಸಲಿರುವ ಪಾತ್ರದ ಬಗ್ಗೆ ಒಂದೆರಡು ದಿನಗಳಲ್ಲಿ ಸ್ಪಷ್ಟ ನಿರ್ಧಹರ ಹೊರಬೀಳಲಿದೆ.
ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ನಂದನ್ ನೀಲೇಕಣಿ ಅವರನ್ನು ಸಂಸ್ಥೆಗೆ ವಾಪಸ್ ಕರೆತರಬೇಕೆಂಬ ಚಿಂತನೆಯೂ ನಡೆದಿದ್ದು, ಐಐಎಎಸ್ ಪ್ರಕಾರ ಸಿಇಒ ಸ್ಥಾನಕ್ಕೆ ನಂದನ್ ನೀಲೆಕಣಿ ಅವರನ್ನು ನೇಮಕ ಮಾಡುವುದು ಉತ್ತಮ ಎಂಬ ಅಭಿಪ್ರಾಯ ಕೇಳಿಬಂದಿದೆ. ಇನ್ಫೋಸಿಸ್ ಸ್ಥಾಪಕರಲ್ಲಿ ನಂದನ್ ನೀಲೇಕಣಿ ಅವರೂ ಒಬ್ಬರಾಗಿದ್ದು, 2002 ರಿಂದ 2007 ರ ವರೆಗೆ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.