ಎಸ್ ಬಿಐ ನಿಂದ 1,300 ಶಾಖೆಗಳ ಐಎಫ್‌ಎಸ್‌ಸಿ ಕೋಡ್ ಗಳ ಬದಲು
ನವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ 1,300 ಶಾಖೆಗಳ ಐಎಫ್‌ಎಸ್‌ಸಿ ಸಂಖ್ಯೆಗಳನ್ನು ಬದಲಾಯಿಸಿದ್ದು ಇತ್ತೀಚೆಗೆ ನಡೆದ ಸಹಯೋಗಿ ಬ್ಯಾಂಕ್‌ಗಳ ವಿಲೀನದ ಪ್ರಕ್ರಿಯೆಯ ಭಾಗವಾಗಿ ಈ ಪ್ರಕ್ರಿಯೆ ನಡೆದಿದೆ.
ಇಂಡಿಯನ್ ಫೈನಾನ್ಷಿಯಲ್ ಸಿಸ್ಟಂ ಕೋಡ್ (ಐಎಫ್‌ಎಸ್‌ಸಿ) ಎಂದು ಕರೆಯಲ್ಪಡುವ ಈ ಸಂಕೇತ ಸಂಖ್ಯೆ 11 ಅಕ್ಷರ ಅಥವಾ ಸಂಖ್ಯೆಯನ್ನು ಹೊಂದಿರುತ್ತದೆ. ಬ್ಯಾಂಕ್ ಶಾಖೆಯನ್ನು ಗುರುತಿಸಲು ಈ ಕೋಡ್ ಸಂಖ್ಯೆಯನ್ನು ರಿಸರ್ವ್ ಬ್ಯಾಂಕ್ ನೀಡುತ್ತದೆ. ಆನ್ ಲೈನ್ ನಲ್ಲಿ ಹಣ ವರ್ಗಾವಣೆ ನಡೆಸಲು ಈ ಐಎಫ್‌ಎಸ್‌ಸಿ ಸಂಖ್ಯೆಯ ಅಗತ್ಯವಿದೆ.
ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಎಲ್ಲ ಶಾಖೆಗಳ ಹಳೆಯ ಮತ್ತು ಹೊಸ ಐಎಫ್‌ಎಸ್‌ಸಿ ಸಂಖ್ಯೆಗಳ ಪಟ್ಟಿಯನ್ನು ಪ್ರಕಟಿಸಿದ್ದು ಹಳೆಯ ಸಂಖ್ಯೆ ಬಳಸಿ ನಡೆಸುವ ಪಾವತಿಗೆ ಹೊಸ ಸಂಖ್ಯೆ ಮ್ಯಾಚ್ ಮಾಡಲಾಗುವುದು. ಇದರಿಂದಾಗಿ ಗ್ರಾಹಕರಿಗೆ ಯಾವ ತೊಂದರೆಯಾಗದೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಯಾವುದೇ ಗ್ರಾಹಕರು ಎಸ್ ಬಿಐ ವೆಬ್ ಸೈಟ್ ಗೆ ಭೇಟಿ ನೀಡಿ ತಮ್ಮ ವಿವರ ತುಂಬಿದರೆ ಅವರ ಬ್ಯಾಂಕ್ ಶಾಖೆಯ ಐಎಫ್‌ಎಸ್‌ಸಿ ಸಂಖ್ಯೆ ಬದಲಾವಣೆಯಾಗಿರುವ ಮಾಹಿತಿ ತಿಳಿಯಬಹುದು.