ನವದೆಹಲಿ: ಕಪ್ಪುಹಣ ಸಂಗ್ರಹಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, 3 ಲಕ್ಷಕ್ಕಿಂತ ಹೆಚ್ಚು ನಗದು ಸ್ವೀಕರಿಸುವವರಿಗೆ ಅಷ್ಟೇ ಪ್ರಮಾಣದ (3 ಲಕ್ಷರೂ ಹೆಚ್ಚು) ದಂಡ ವಿಧಿಸಲಾಗುವ ನಿಯಮ ಏ.1 ರಿಂದ ಜಾರಿಗೆ ಬರಲಿದೆ.
2017-18 ನೇ ಸಾಲಿನ ಬಜೆಟ್ ನಲ್ಲಿ ಅರುಣ್ ಜೇಟ್ಲಿ, 3 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟಿಗೆ ನಿರ್ಬಂಧ ವಿಧಿಸಿದ್ದರು. ಈ ಬಗ್ಗೆ ಪಿಟಿಐ ಗೆ ಸಂದರ್ಶನ ನೀಡಿರುವ ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅದಿಯಾ, 3 ಲಕ್ಷದ ಮೇಲ್ಪಟ್ಟ ನಗದು ಹಣವನ್ನು ಸ್ವೀಕರಿಸುವವರಿಗೆ ಅಷ್ಟೇ ಪ್ರಮಾಣದ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.
ಉದಾಹರಣೆಗೆ 4 ಲಕ್ಷ ರೂ ನಗದು ಸ್ವೀಕರಿಸಿದರೆ 4 ಲಕ್ಷ ದಂಡ ವಿಧಿಸಲಾಗುತ್ತದೆ. 50 ಲಕ್ಷ ರೂ ನಗದು ಸ್ವೀಕರಿಸಿದರೆ 50 ಲಕ್ಷ ದಂಡ ವಿಧಿಸಲಾಗುತ್ತದೆ, ದಂಡವನ್ನು ಹಣ ಸ್ವೀಕರಿಸುವವರಿಗೆ ವಿಧಿಸಲಾಗುತ್ತದೆ ಎಂದು ಹಸ್ಮುಖ್ ಅದಿಯಾ ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯವಾಗಿ ಹೆಚ್ಚು ನಗದು ವಹಿವಾಟು ನಡೆಸುವವರಿಗೆ (ಉದ್ಯಮಿ, ವ್ಯಾಪರಿಗಳು) ಅವಕಾಶವಿರಲಿದೆ. ನೋಟು ನಿಷೇಧದಿಂದ ಕಪ್ಪುಹಣದ ಲೆಕ್ಕ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಕಪ್ಪುಹಣ ಮತ್ತಷ್ಟು ಸಂಗ್ರಹವಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದಿಯಾ ಹೇಳಿದ್ದಾರೆ.