ನವದೆಹಲಿ: ಕಳೆದ ವರ್ಷ ನವೆಂಬರ್ 8ರಂದು ಗರಿಷ್ಠ ಮೌಲ್ಯದ ನೋಟ್ ಗಳನ್ನು ನಿಷೇಧಿಸಿದ ನಂತರ ಇದುವರೆಗೆ ಒಟ್ಟು 9.2 ಲಕ್ಷ ಕೋಟಿ ರುಪಾಯಿ ಮೌಲ್ಯದ ಹೊಸ ನೋಟ್ ಗಳನ್ನು ಚಲಾವಣೆಗೆ ತರಲಾಗಿದೆ ಎಂದು ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ಬುಧವಾರ ಸಂಸತ್ ಸಮಿತಿಗೆ ತಿಳಿಸಿರುವುದಾಗಿ ಸಂಸದೀಯ ಮೂಲಗಳು ತಿಳಿಸಿವೆ.
ಇಂದು ಹಣಕಾಸು ವಿಭಾಗದ ಸಂಸದೀಯ ಸ್ಥಾಯಿ ಸಮಿತಿ ಭೇಟಿ ಮಾಡಿದ ಪಟೇಲ್, 500 ಹಾಗೂ 1000 ರುಪಾಯಿ ನೋಟ್ ನಿಷೇಧಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಕೇಂದ್ರ ಸರ್ಕಾರ ನೋಟ್ ನಿಷೇಧ ನಿರ್ಧಾರ ಪ್ರಕಟಿಸಿದ ನಂತರ ಆರ್ ಬಿಐ ದೇಶದಲ್ಲಿ ಚಲಾವಣೆಯಲ್ಲಿದ್ದ 15.4 ಲಕ್ಷ ಕೋಟಿ ರುಪಾಯಿ ಮೌಲ್ಯದ 500 ಹಾಗೂ 1000 ರುಪಾಯಿ ನೋಟ್ ಗಳನ್ನು ಹಿಂಪಡೆದಿತ್ತು. ಆದರೆ ನೋಟು ರದ್ದತಿ ನಂತರ ಬ್ಯಾಂಕುಗಳಲ್ಲಿ ಒಟ್ಟು ಎಷ್ಟು ಹಣ ಮರಳಿ ಜಮಾಯಾಗಿದೆ ಎಂಬುದರ ಬಗ್ಗೆ ನಿರ್ದಿಷ್ಟ ಅಂಕಿಅಂಶ ಇನ್ನೂ ಸಿಕ್ಕಿಲ್ಲ ಎಂದು ಉರ್ಜಿತ್ ಪಟೇಲ್ ಸಂಸದೀಯ ಸಮಿತಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕ ವೀರಪ್ಪ ಮೊಯಲಿ ನೇತೃತ್ವದ ಹಣಕಾಸು ವಿಭಾಗದ ಸಂಸದೀಯ ಸ್ಥಾಯಿ ಸಮಿತಿಯು ಕಳೆದ ಶುಕ್ರವಾರದಂದು ಉರ್ಜಿತ್ ಪಟೇಲ್‌ಗೆ ಉತ್ತರಿಸುವಂತೆ ಪ್ರಶ್ನೆ ಕೇಳಿತ್ತು.