ಬೆಂಗಳೂರು: ಕೆಳ ಹಂತದ ಕೆಲಸಗಳನ್ನು ಆಟೋಮೇಶನ್(ಯಾಂತ್ರೀಕರಣ) ಮಾಡಿದ್ದರಿಂದ ಕಳೆದ ಒಂದು ವರ್ಷದಲ್ಲಿ ಸುಮಾರು 8ರಿಂದ 9 ಸಾವಿರ ಉದ್ಯೋಗಿಗಳನ್ನು 'ಬಿಡುಗಡೆ' ಮಾಡಿರುವುದಾಗಿ ಇನ್ ಫೋಸಿಸ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್ ಅವರು ತಿಳಿಸಿದ್ದಾರೆ.
ಆಟೋಮೇಶನ್ ಪರಿಣಾಮವಾಗಿ "ಬಿಡುಗಡೆ' ಮಾಡಲಾಗಿರುವ ಕೆಳ ಹಂತದ ಉದ್ಯೋಗಿಗಳನ್ನು ಹೆಚ್ಚು ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ಗ್ಲೋಬಲ್ ಶೇಪರ್ಸ್ ನ ಬೆಂಗಳೂರು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಂಕರ್ ಅವರು, 'ಆಟೋಮೇಶನ್ ಪರಿಣಾಮವಾಗಿ ನಾವು ಪ್ರತೀ ತ್ತೈಮಾಸಿಕದಲ್ಲಿ ಸುಮಾರು 2,000 ಉದ್ಯೋಗಿಗಳನ್ನು ಬಿಡುಗಡೆ ಮಾಡಿ ಅವರನ್ನು ವಿಶೇಷ ಕೋರ್ಸ್‌ಗಳಲ್ಲಿ ತೊಡಗಿಸಲು ತರಬೇತಿ ನೀಡುತ್ತಿದ್ದೇವೆ. ಇದರಿಂದಾಗಿ ಹೊಸ ಆಧುನೀಕೃತ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳುವುದಕ್ಕೆ ಅವರಿಗೆ ಅನುಕೂಲವಾಗುತ್ತಿದೆ' ಎಂದರು.
ಮುಂಬರುವ ದಿನಗಳಲ್ಲಿ ಆಟೋಮೇಶನ್ ಪ್ರಕ್ರಿಯೆಯು ಮತ್ತಷ್ಟು ತೀವ್ರಗೊಳ್ಳಲಿದ್ದು, ಇದರ ಪರಿಣಾಮವಾಗಿ ಉದ್ಯೋಗಿಗಳ ನೇಮಕಾತಿ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.