ನವದೆಹಲಿ: ಎಲೆಕ್ಟ್ರಾನಿಕ್ ಪಾವತಿ (ಇ-ಪೇಮೆಂಟ್) ವ್ಯವಸ್ಥೆಯನ್ನು ದೇಶಾದ್ಯಂತ ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ, ಅದಕ್ಕಾಗಿಯೇ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರ(ಸಂಸ್ಥೆ)ಯನ್ನು ಅಸ್ತಿತ್ವಕ್ಕೆ ತರುವ ಪ್ರಸ್ತಾವನೆಯನ್ನು ಪರಿಗಣಿಸಿದೆ.
ಡಿಜಿಟಲ್ ವಹಿವಾಟುಗಳ ಶುಲ್ಕಗಳನ್ನು ನಿಯಂತ್ರಿಸುವುದು ಪ್ರಸ್ತಾವಿತ ಹೊಸ ಸಂಸ್ಥೆಯ ಮುಖ್ಯ ಉದ್ದೇಶವಾಗಿರಲಿದ್ದು, ರಿಸರ್ವ್ ಬ್ಯಾಂಕ್ ಅಡಿಯಲ್ಲಿ ಬಾರದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ರತನ್ ವಾಟಾಳ್ ನೇತೃತ್ವದ ಸಮಿತಿ ಡಿಜಿಟಲ್ ಪಾವತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರ್ ಬಿಐ ಗಿಂತ ಸ್ವಾಯತ್ತ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಉತ್ತಮ ಎಂಬ ಶಿಫಾರಸನ್ನು ಸರ್ಕಾರಕ್ಕೆ ನೀಡಿದೆ.
ಆದರೆ ಪಾವತಿ ವ್ಯವಸ್ಥೆಯ ನಿಯಂತ್ರಣವನ್ನು ಬಿಟ್ಟುಕೊಡಲು ಆರ್ ಬಿಐ ನಿರಾಕರಿಸಿದ್ದು ರತನ್ ವಾಟಾಳ್ ನೇತೃತ್ವದ ಸಮಿತಿಯ ಕೆಲವೊಂದು ಅಂಶಗಳಿಗೆ ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಅಧಿಕೃತ ಮೂಲಗಳ ಪ್ರಕಾರ ಬ್ಯಾಂಕಿಂಗ್ ನಿಯಂತ್ರಣಾ ಪ್ರಾಧಿಕಾರ(ಸಂಸ್ಥೆ)ಯಾಗಿರುವ ಆರ್ ಬಿಐ ಬ್ಯಾಂಕ್ ಗಳಿಗೆ ಲಾಭವಾಗುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುತ್ತದೆ. ಆದರೆ ಪಾವತಿಗೆ ಸಂಬಂಧಿಸಿದಂತೆ ಯಾವುದೇ ಪರಿಣಾಮಕಾರಿ ಅಥವಾ ಹೊಸ ಆವಿಷ್ಕಾರಗಳನ್ನು ಜಾರಿಗೆ ತರುವುದಿಲ್ಲ. ಒಟ್ಟಾರೆಯಾಗಿ ಆರ್ ಬಿಐ ನ ನಿಯಂತ್ರಣಗಳು ಕೇವಲ ಬ್ಯಾಂಕ್ ಕೇಂದ್ರೀಕೃತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳಿಗಾಗಿಯೇ ಪ್ರತ್ಯೇಕ ನಿಯಂತ್ರಣಾ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರಲು ಅವಕಾಶವಿದೆ ಎಂದು ಪಿಟಿಐ ಗೆ ಅಧಿಕೃತ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಹಣ ಪೂರೈಕೆಯನ್ನು ನಿಯಂತ್ರಿಸುವುದು ರಿಸರ್ವ್ ಬ್ಯಾಂಕ್ ನ ಅವಿಭಾಜ್ಯ ಕಾರ್ಯವಾಗಿರುವ ಕಾರಣ ಪಾವತಿಗಳ ನಿಯಂತ್ರಣವೂ ರಿಸರ್ವ್ ಬ್ಯಾಂಕ್ ಅಡಿಯಲ್ಲೇ ಬರಬೇಕು ಎಂದು ವಾಟಾಳ್ ಸಮಿತಿಯ ಅಂಶಗಳಿಗೆ ವಿರೋಧ ವ್ಯಕ್ತಪಡಿಸಿರುವ ಆರ್ ಬಿಐ ಹೇಳಿದೆ.
ಆದರೆ ಡಿಜಿಟಲ್ ಪಾವತಿಗಳಿಗೆ ಪ್ರತ್ಯೇಕ ನಿಯಂತ್ರಣಾ ಪ್ರಾಧಿಕಾರ(ಸಂಸ್ಥೆಯ) ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿರುವ ಸರ್ಕಾರ, ಇ-ಪಾವತಿಗಳಲ್ಲಿ ನಗದು ರೂಪದಲ್ಲಿ ಹಣದ ವಹಿವಾಟು ನಡೆಯುವುದಿಲ್ಲ. ಅಂತೆಯೇ ಠೇವಣಿಯನ್ನು ವಾಪಸ್ ಪಡೆಯುವುದು ಸೇರಿದಂತೆ ಮುಂತಾದ ಪ್ರಕ್ರಿಯೆಗಳನ್ನು ಹೊಂದಿರುವುದಿಲ್ಲವಾದ ಕಾರಣ ಡಿಜಿಟಲ್ ಪಾವತಿಗಳಿಗೆ ಪ್ರತ್ಯೇಕ ನಿಯಂತ್ರಣಾ ಪ್ರಾಧಿಕಾರವನ್ನು ರಚಿಸಬಹುದು ಎಂದು ಹೇಳಿದೆ.
"ಪಾವತಿಗಳು ಬ್ಯಾಂಕಿಂಗ್ ನ ಹೊರತಾಗಿಯೂ ನಡೆಯಬಹುದು. ಬ್ಯಾಂಕಿಂಗ್ ನಿಯಂತ್ರಣಕ್ಕಿಂತ ಪಾವತಿ ನಿಯಂತ್ರಣ ಭಿನ್ನವಾಗಿದೆ. ಆದರೆ ಆರ್ ಬಿಐ ಮಾತ್ರ ಪ್ರತ್ಯೇಕ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ವರದಿ ಸಲ್ಲಿಸಿರುವ ವಾಟಾಳ್ ಸಮಿತಿ, ಎರಡು ಆಯ್ಕೆಗಳನ್ನು ಮುಂದಿಟ್ಟಿದ್ದು ಸ್ವಾಯತ್ತ ನಿಯಂತ್ರಣ ಪ್ರಾಧಿಕಾರ ಒಂದಾದರೆ ಮತ್ತೊಂದು ಆರ್ ಬಿಐ ನ ವ್ಯಾಪ್ತಿಯಲ್ಲೇ ಇರುವ ಪಾವತಿ- ಸೆಟ್ಲ್ ಮೆಂಟ್ ನಿಯಂತ್ರಣ ವ್ಯವಸ್ಥೆ ಮತ್ತು ಮೇಲ್ವಿಚಾರಣೆ ಮಂಡಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದು ಮತ್ತೊಂದು ಆಯ್ಕೆಯಾಗಿದೆ.