ನವದೆಹಲಿ: ಸಾವಿರಗಟ್ಟಲೆ ಮೊತ್ತವನ್ನು ಬಾಕಿ ಪಾವತಿ ಮಾಡಬೇಕಾಗಿದ್ದ, ನಷ್ಟ ಎದುರಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯನ್ನು 2015 ರಲ್ಲಿ ಕಲಾನಿಧಿ ಮಾರನ್ ನಿಂದ ಅಜಯ್ ಸಿಂಗ್ ಕೇವಲ 2 ರೂಪಾಯಿಗೆ ಖರೀದಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಮಾರನ್-ಸಿಂಗ್ ನಡುವಿನ ವಿವಾದ ಪ್ರಕರಣವೊಂದರಲ್ಲಿ ದೆಹಲಿ ನ್ಯಾಯಾಲಯ ತೀರ್ಪು ನೀಡಿದ ನಂತರ ಈ ಅಂಶ ಬೆಳಕಿಗೆ ಬಂದಿದ್ದು, 35 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಶೇ.58.5 ರಷ್ಟು ಷೇರುಗಳನ್ನು ಮಾರನ್ ಕಲ್ ಏರ್ವೇಸ್ ಸಂಸ್ಥೆಯಿಂದ ಅಜಯ್ ಸಿಂಗ್ ಕೇವಲ 2 ರೂಪಾಯಿಗಳಿಗೆ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.
2015 ರಲ್ಲಿ ಈ ಬಗ್ಗೆ ಒಪ್ಪಂದ ನಡೆದಿದ್ದು, ಮಾರನ್ ಒಡೆತನದ ವಿಮಾನ ಸಂಸ್ಥೆ ಮಾಡಿದ್ದ ಸಾಲವನ್ನೂ ಸೇರಿಸಿ ಸಂಸ್ಥೆಯನ್ನು ಅಜಯ್ ಸಿಂಗ್ ಖರೀದಿಸಿದ್ದಾರೆ. ನಷ್ಟ ಎದುರಿಸುತ್ತಿದ್ದ ಮಾರನ್ ಒಡೆತನದ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ತಕ್ಷಣವೇ ಪಾವತಿ ಮಾಡಬೇಕಿದ್ದ ರೂ. 2,200 ಕೋಟಿ ಸೇರಿದಂತೆ ಒಟ್ಟು 3,500 ಕೋಟಿ ರೂಪಾಯಿಯಷ್ಟು ಬಾಕಿ ಮೊತ್ತವನ್ನು ಪಾವತಿ ಮಾಡಬೇಕಿತ್ತು. ಸ್ಪೈಸ್ ಜೆಟ್ ಸಂಸ್ಥೆ ಪಾವತಿ ಮಾಡಬೇಕಿದ್ದ ಒಟ್ಟು ಮೊತ್ತವನ್ನೂ ಸೇರಿಸಿ ಅಜಯ್ ಸಿಂಗ್ ವಿಮಾನ ಸಂಸ್ಥೆಯನ್ನು ಕೇವಲ 2 ರೂಪಾಯಿಗೆ ಖರೀದಿಸಿದ್ದಾರೆ ಎಂದು 2015 ರ ಒಪ್ಪಂದದಿಂದ ತಿಳಿದುಬಂದಿದೆ. ಅಜಯ್ ಸಿಂಗ್ ಸಂಸ್ಥೆಯನ್ನು ಖರೀದಿಸಿದ ನಂತರ ಸಂಸ್ಥೆ ಲಾಭ ಗಳಿಸಲು ಪ್ರಾರಂಭಿಸಿದೆ.
ಭಾರತದಲ್ಲೇ ಅತ್ಯಂತ ಅಗ್ಗದ ಖರೀದಿ ಎಂದು ಹೇಳಲಾಗುತ್ತಿರುವ ಸ್ಪೈಸ್ ಜೆಟ್ ಷೇರುಗಳ ಖರೀದಿ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ನಷ್ಟದಲ್ಲಿ ನಡೆಯುತ್ತಿರುವ ಏರ್ ಇಂಡಿಯಾ ಸಂಸ್ಥೆಯನ್ನು ಆ ಸಂಸ್ಥೆ ಮಾಡಿರುವ 52,000 ಕೋಟಿ ರೂಪಾಯಿ ಸಾಲದ ಸಹಿತ ರೂ.1ಕ್ಕೆ ಖರೀದಿಸಲು ಯಾವುದಾದರೂ ಸಂಸ್ಥೆಗಳು ಒಂದು ವೇಳೆ ಮುಂದಾದರೆ, ಖಾಸಗಿ ಸಂಸ್ಥೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಕೇವಲ 1 ರೂಪಾಯಿಗೆ ಖರೀದಿಸಿತು ಎನ್ನಲು ಸಾಧ್ಯವಿಲ್ಲ ಏಕೆಂದರೆ 52,000 ಕೋಟಿ ರೂ ಸಾಲಕ್ಕೆ ಖರೀದಿಸುವ ಸಂಸ್ಥೆಯೇ ಹೊಣೆಯಾಗಲಿದ್ದು, ಬಾಕಿ ಪಾವತಿ ಮಾಡಬೇಕಾಗುತ್ತದೆ, ಆದ್ದರಿಂದ ಕೇವಲ 2 ರೂಪಾಯಿಗೆ ಅಜಯ್ ಸಿಂಗ್ ಸ್ಪೈಸ್ ಜೆಟ್ ನ್ನು ಖರೀದಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.