ಬದಲಾಗುತ್ತಿದೆ ಮಧ್ಯ ಪ್ರಾಚ್ಯ ಖತಾರ್ ಮೇಲಿನ ಬಹಿಷ್ಕಾರ ನೀಡುತ್ತಿದೆ ಹೊಸ ಸಾಕ್ಷ್ಯ !
ಕಳೆದೊಂದು ವಾರದಿಂದ ಸೌದಿ ಸೇರಿದಂತೆ ಮಾಲ್ಡೀವ್ಸ್,ಲಿಬಿಯಾ, ಈಜಿಪ್ಟ್, ಯೆಮೆನ್, ಬಹರೈನ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳು ತಮ್ಮ ಪಕ್ಕದಲ್ಲೇ ಇರುವ ಕತಾರ್ ದೇಶದ ಮೇಲೆ ಮುನಿಸಿಕೊಂಡಿವೆ. ಮುನಿಸಿ ಕೊಳ್ಳುವುದಷ್ಟೇ ಅಲ್ಲದೆ ಎಲ್ಲಾ ರೀತಿಯ ರಾಜನೀತಿಕ ಸಂಬಂಧ ಕಡಿದುಕೊಂಡು ಕತಾರ್ ಮೇಲೆ ಬಹಿಷ್ಕಾರ ಹಾಕಿವೆ. ಕತಾರ್ ದೇಶಕ್ಕೆ ಆಹಾರ ಪದಾರ್ಥದ ಅರ್ಧದ ಆಜುಬಾಜು ಸರಬರಾಜು ಆಗುವುದು ಸೌದಿಯ ಮೂಲಕ. ಸೌದಿ ಇದೀಗ ತನ್ನ ಸರಹದ್ದು ಮುಚ್ಚಿದೆ. ಹೀಗಾಗಿ ಕತಾರ್ ಗೆ ಹೋಗುತ್ತಿದ್ದ ಆಹಾರ ಪದಾರ್ಥಕ್ಕೆ ಕಡಿವಾಣ ಬಿದ್ದಿದೆ. ಕತಾರ್ ನಲ್ಲಿ ಸಣ್ಣ ಮಟ್ಟದ ಸಂಚಲನ ಶುರುವಾಗಿದೆ. ಈ ಸಮಯವನ್ನ ಬಳಸಿಕೊಂಡು ಇರಾನ್ ಕತಾರ್ ದೇಶಕ್ಕೆ ಆಹಾರ ಪದಾರ್ಥದ ನೆರವು ನೀಡಿ ತನ್ನ ರಾಜಕೀಯ ನಿಪುಣತೆ ಮೆರೆದಿದೆ. ಇದೆಲ್ಲಾ ಕಳೆದ ವಾರದಿಂದ ಇವತ್ತಿನವರೆಗಿನ ಬೆಳವಣಿಗೆಯ ಸೂಕ್ಷ್ಮ ಮಜಲುಗಳು. ಹಾಗೆ ನೋಡಲು ಹೋದರೆ ಕತಾರ್ ಸೌದಿಯ ಚಿಕ್ಕ ತಮ್ಮನಿದ್ದಂತೆ! ಈ ಅಣ್ಣ - ತಮ್ಮ ಬಾಂಧ್ಯವದಲ್ಲಿ ಬಿರುಕು ಏಕೆ ಮತ್ತು ಹೇಗೆ ಹುಟ್ಟಿತು? ಎನ್ನುವುದು ಕಥೆಯ ಮುಖ್ಯ ತಿರುಳು. ಜಗತ್ತಿಗೆ ಸೌದಿ ಮತ್ತು ಇತರ ಅರಬ್ ದೇಶಗಳು ನೀಡುತ್ತಿರುವ ಕಾರಣ ಕತಾರ್ ಭಯೋದ್ಪಾದನೆಗೆ ಕುಮ್ಮುಕ್ಕು ನೀಡುತ್ತಿದೆ ಎನ್ನುವುದು. ಇದೆಂತ ತಮಾಷೆ ನೋಡಿ ಜಗತ್ತಿಗೆ ಭಯೋತ್ಪಾದನೆಯ ಗುಮ್ಮನ ಪರಿಚಯಿಸಿದ ಕೀರ್ತಿ ಹೊಂದಿರುವ ದೇಶ ಇನ್ನೊಂದು ದೇಶವನ್ನ ಭಯೋದ್ಪಾದನೆಗೆ ಕುಮ್ಮುಕ್ಕು ನೀಡುತ್ತಿದೆ ಎನ್ನುವ ಆರೋಪ ಹೊರಿಸುತ್ತೆ.
ಸೌದಿಗೆ ಕತಾರ್ ಮೇಲೆ ಇಷ್ಟೊಂದು ಮುನಿಸು ಬರಲು ಕಾರಣವೇನು ?
ಎಲ್ಲಕ್ಕೂ ಮೊದಲು ಕತಾರ್ ದೇಶದ ಸಂಪತ್ತು ! ಹೌದು ಕತಾರ್ 2016 ಇಸವಿಯಲ್ಲಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಹೊರಡಿಸುವ ಅಂಕಿಅಂಶದ ಪ್ರಕಾರ ಜಗತ್ತಿನ ಅತಿ ಹೆಚ್ಚು ತಲಾದಾಯ ಹೊಂದಿದ ದೇಶವಾಗಿ ಹೊರಹೊಮ್ಮಿದೆ. ದಶಕಗಳ ಹಿಂದೆ ಸೌದಿ ಹೇಳಿದ ಮಾತಿಗೆ ವಿರುದ್ಧ ಹೇಳದೆ ನೆಡೆಯುತ್ತಿದ್ದ ಖತಾರ್ ಇದೀಗ ತನ್ನದೇ ವಿದೇಶಿ ನೀತಿ, ಪ್ರತ್ಯೇಕ ರಾಜಕೀಯ ನೆಡೆ ಕಂಡುಕೊಂಡಿದೆ. ಜಗತ್ತಿನ ದೊಡ್ಡ ನ್ಯಾಚುರಲ್ ಗ್ಯಾಸ್ ಉತ್ಪಾದಿಸುವ ದೇಶವಾಗಿದೆ. ಸೌದಿಯ ಸ್ಥಿತಿ ದಶಕದ ಹಿಂದೆ ಇದ್ದ ಹೊಳಪು ಕಳೆದುಕೊಂಡು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾಂಡ್ ವಿತರಣೆ ಮಾಡಿ ಹಣ ಸಾಲವನ್ನಾಗಿ ಪಡೆಯುವ ಮಟ್ಟ ತಲುಪಿದೆ. ಸಹಜವಾಗೆ ತಮ್ಮನ ಏಳ್ಗೆ ಅಣ್ಣನ ಹೊಟ್ಟೆಯಲ್ಲಿ ಧಗೆಯನ್ನ ಉಂಟುಮಾಡಿದೆ.
ಎರಡೆನೆಯದಾಗಿ ಕತಾರ್ ತನ್ನ ಬಳಿ ಇರುವ ಸಂಪತ್ತನ್ನಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು 2022 ರ ಫುಟ್ಬಾಲ್ ವರ್ಲ್ಡ್ ಕಪ್ ಆಯೋಜಿಸಲು ಬಯಸಿದೆ. ಅದಕ್ಕಾಗಿ ಹಲವು ಹತ್ತು ಬದಲಾವಣೆಗಳನ್ನ ಮಾಡಿಕೊಂಡು ಮುಂದುವರಿಯುತ್ತಿದೆ. ದಶಕಗಳ ಹಿಂದೆ ಕಣ್ಣು ಕಂಡಷ್ಟು ದೂರ ಮರಳು ತುಂಬಿದ್ದ ಮರಳುಗಾಡಿನ ಕತಾರ್ ಎನ್ನುವ ದೇಶ ಅಭಿವೃದ್ಧಿಗೆ ತನನ್ನ ಒಗ್ಗಿಕೊಂಡ ವೇಗ ಸೌದಿ ಜೊತೆ ಜೊತೆಗೆ ಇತರ ಅರಬ್ ದೇಶಗಳ ಕಣ್ಣು ಕುಕ್ಕಿದೆ.
ಮೂರನೆಯದಾಗಿ ತನ್ನದೇ ಆದ ಕತಾರ್ ಏರ್ಲೈನ್ಸ್ ಆರಂಭಿಸಿ ಅದನ್ನ ಯಶ್ವಸಿಯಾಗಿ ನೆಡೆಸಿಕೊಂಡು ಬರುತ್ತಿದೆ. ಅರಬ್ ಸಂಯುಕ್ತ ಸಂಸ್ಥಾನದ ಎಮಿರೇಟ್ಸ್ ಏರ್ಲೈನ್ಸ್ ಗೆ ಇದರಿಂದ ನೇರ ಹೊಡೆತ ಬಿದ್ದಿದೆ. ಸೇವೆ ಬೆಲೆ ಎರಡರಲ್ಲೂ ಎಮಿರೇಟ್ಸ್ ಗೆ ತನ್ನ ಹುಟ್ಟಿನ ದಿನದಿಂದ ಇಂದಿನವರೆಗೆ ಸಾಕಷ್ಟು ಪೈಪೋಟಿ ಕೊಡುತ್ತಿದೆ. ಅಷ್ಟೇ ಅಲ್ಲದೆ ಅಲ್ ಜಸೀರಾ ಎನ್ನುವ ಮಾಧ್ಯಮ ಸಂಸ್ಥೆಯನ್ನ ಕೂಡ ಕತಾರ್ ದೇಶ ಹೊಂದಿದೆ. ಗಲ್ಫ್ ಕೋಪೆರೇಷನ್ ಕೌನ್ಸಿಲ್ ನಲ್ಲಿ ಇರುವ ದೇಶಗಳಿಗೆ ಇಷ್ಟೆಲ್ಲಾ ಬಲ ಹೊಂದಿರುವ ಕತಾರ್ ಸಹ್ಯವಾಗುತ್ತಿಲ್ಲ.
ನಾಲ್ಕನೆಯದಾಗಿ ಗಲ್ಫ್ ಕೋ ಆಪರೇಷನ್ ಕೌನ್ಸಿಲ್ ನಲ್ಲಿ ತನ್ನ ಮಾತೆ ನೆಡೆಯಬೇಕು ಎನ್ನುವುದು ಸೌದಿಯ ಹಠ. ಇಷ್ಟೂ ದಿನ GCC ಯಲ್ಲಿ ಸೌದಿ ವಿರುದ್ಧ ಬೇರೆ ಯಾವುದೇ ಅರಬ್ ದೇಶ ಸೊಲ್ಲೆತ್ತುತ್ತಿರಲಿಲ್ಲ ಕತಾರ್ ಸೌದಿಯ ಪರಮಾಧಿಕಾರ ಪ್ರಶ್ನಿಸುವ ಮೂಲಕ ಸೌದಿಯ ಕೆಂಗಣ್ಣಿಗೆ ಗುರಿಯಾಗಿದೆ.
ಕೇವಲ ಇವಿಷ್ಟೇ ಆಗಿದ್ದರೆ ತನ್ನ ತಮ್ಮನನ್ನ ಸೌದಿ ಕ್ಷಮಿಸಿಬಿಡುತ್ತಿತ್ತೋ ಏನೋ? ಇವತ್ತಿನ ಮಟ್ಟಿನ ಮುನಿಸು ಬರಲು ಮುಖ್ಯ ಕಾರಣ ಕತಾರ್ ಶಿಯಾ ಮೆಜಾರಿಟಿ ಇರುವ ಇರಾನ್ ಜೊತೆ ಸ್ನೇಹ ಬೆಳಸಿದ್ದು. ಅನಾದಿ ಕಾಲದಿಂದಲೂ ಸೌದಿ ಇರಾನ್ ದೇಶವನ್ನ ತನ್ನ ಪರಮ ಶತ್ರು ಎಂದೇ ಪರಿಗಣಿಸಿದೆ. ಇದು ಗೊತ್ತಿದ್ದೂ ಕತಾರ್ ಇರಾನ್ ನೊಂದಿಗೆ ಸ್ನೇಹ ಬೇಸದದ್ದು ಸೌದಿ ಯ ಲ್ಲಿ ಕತಾರ್ ಬಗ್ಗೆ ಉಳಿದಿದ್ದ ಅಲ್ಪ ಸ್ವಲ್ಪ ತಾಳ್ಮೆಯನ್ನ ಕೊನೆಗೊಳಿಸಿದೆ. ಹಾಗೆ ನೋಡಲು ಹೋದರೆ ಕತಾರ್ ಕೂಡ ಸುನ್ನಿ ಮುಸ್ಲಿಮರನ್ನ ಮೆಜಾರಿಟಿ ಹೊಂದಿರುವ ದೇಶ. ವಸ್ತುಸ್ಥಿತಿ ಹೀಗಿದ್ದೂ ಕತಾರ್ ಇರಾನ್ ನೊಂದಿಗೆ ಶಾಂತಿ ವ್ಯಾಪಾರಕ್ಕೆ ಮುಂದಾಗಿದ್ದೆ ಉಳಿದ ಅರಬ್ ದೇಶಗಳು ತಿರುಗಿ ಬೀಳಲು ಕಾರಣ.
ಕೊನೆಯದಾಗಿ ಬೆಂದ ಮನೆಯಲ್ಲಿ ಎಷ್ಟು ಲಾಭವಾಗಬಹದು ಎನ್ನುವ ಲೆಕ್ಕಾಚಾರಕ್ಕೆ ಹಿರಿಯಣ್ಣ ಅಮೇರಿಕಾ ಸೌದಿಗೆ ಭೇಟಿ ನೀಡಿ ಹಸ್ತಲಾಘವ ನೀಡಿದ ಮೇಲೆ ಮೇಲೆ ಹೇಳಿದ ಎಲ್ಲಾ ಘಟನೆಗಳು ತ್ವರಿತವಾಗಿ ಆಗಿ ಹೋದವು . ಸದ್ದಾಂ ಹುಸೇನ್ ನನ್ನ ವೆಪನ್ ಆಫ್ ಮಾಸ್ ಡಿಸ್ಟ್ರಕ್ಷನ್ ಹೊಂದಿದ್ದಾನೆ ಎಂದು ಹೇಳಿ ಇರಾಕ್ ದೇಶವನ್ನ ಶಿಲಾಯುಗಕ್ಕೆ ಮರಳಿಸಿದ್ದು ಇತಿಹಾಸ. ಸೌದಿ ಅಮೇರಿಕಾ ಹಿಂದೆದೂ ಮಾಡಿಕೊಂಡಿರದ ಮೊತ್ತಕ್ಕೆ ಆಯುಧ ಖರೀದಿ ಒಪ್ಪಂದ ಮಾಡಿಕೊಂಡಿವೆ. ಇವುಗಳ ನಡುವಿನ ಬಾಂಧ್ಯವ ಹೊಸ ಮಟ್ಟ ಮುಟ್ಟಿವೆ . ಜಗತ್ತಿನ ನಾಯಕರನ್ನ ತನಗಿಂತ ಚಿಕ್ಕವರು ಎಂದು ತೋರಿಸುವ ಆಂಗಿಕ ಬಾವವನ್ನ ತೋರಿಸುವ ಟ್ರಂಪ್ ಸೌದಿಯ ಯುವರಾಜನನ್ನ ಅಪ್ಪಿ ಭುಜ ತಟ್ಟಿ ಸ್ವಾಗತ ನೀಡಿದ್ದಾನೆ . ಇವರೆಲ್ಲರ ವಿಶ್ವಾಸ ಬಾಂಧ್ಯವದ ಕೊಂಡಿ ಹಣ, ನನಗೇನು ಲಾಭ ಎನ್ನುವ ಲೆಕ್ಕಾಚಾರ ಎನ್ನುವುದು ಬುದ್ದಿವಂತ ಓದುಗ ಈ ವೇಳೆಗಾಗಲೇ ಗ್ರಹಿಸಿರುತ್ತಾನೆ ಎನ್ನುವ ವಿಶ್ವಾಸ ನನ್ನದು.
ಮುನಿಸಿಗೆ ಕಾರಣ ಹತ್ತು ನೀಡಲಿ ಮುಖ್ಯ ಕಾರಣ ಸೌದಿಯ ಬೊಕ್ಕಸ ಬರಿದಾಗಿದೆ . ಕತಾರ್ ಖಜಾನೆ ತುಂಬಿ ತುಳುಕುತ್ತಿದೆ. 2022 ರ ಫುಟ್ಬಾಲ್ ವರ್ಲ್ಡ್ ಕಪ್ ಆಯೋಜಿಸಲು ತನ್ನ ದೇಶದ ಮೂಲ ಸೌಕರ್ಯ ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ಕಾತರ್ ವಾರಕ್ಕೆ 500 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಮಾಡುತ್ತಿದೆ ಎಂದರೆ ಕತಾರ್ ಎಷ್ಟು ಸಂಪದ್ಭರಿತ ಎನ್ನುವ ಸಣ್ಣ ಸುಳಿವು ನಿಮ್ಮದಾದೀತು. 2022 ಕ್ಕೆ ಇನ್ನು ಸಮಯವಿದೆ. ಆದರೆ ಅಂತರರಾಷ್ಟ್ರೀಯ ಸಮುದಾಯ ಮುಖ ಬೇರೆಡೆ ತಿರುಗಿಸಲು ಇಷ್ಟು ಕಾರಣ ಸಾಕಲ್ಲ. ರಿಸ್ಕ್ ಅಸ್ಸೇಸ್ಮೆಂಟ್ ಮಾಡದೆ ಬೇರೆ ದಾರಿಯಿಲ್ಲ ಎನ್ನುವ ಮಾತುಗಳು ಆಗಲೇ ಶುರುವಾಗಿದೆ. ಹಾಗೊಮ್ಮೆ ಈ ಪ್ರಾಯೋಜಕತ್ವ ಕೈತಪ್ಪಿದರೆ ಬಿಲಿಯನ್ ನಲ್ಲಿ ಹಣ ಕಳೆದು ಕೊಳ್ಳಲಿದೆ ಖತಾರ್.
ಲಕ್ಷಾಂತರ ಸಂಖ್ಯೆಯಲ್ಲಿ ಕತಾರ್ ನಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿರುವ ಮತ್ತು ಇನ್ನಿತರ ಹುದ್ದೆಯಲ್ಲಿ ಇರುವ ಭಾರತೀಯರ ಪಾಡು ಅಸಹನೀಯವಾಗಲಿದೆ. ಕತಾರ್ 2022 ಕ್ಕೆ ಕಂಡ ಕನಸಿನಂತೆ ಲಕ್ಷಾಂತರ ಭಾರತೀಯರ ಚಿಕ್ಕ ಚಿಕ್ಕ ಕನಸುಗಳು ಕಮರಲಿವೆ.
ದೊಡ್ಡವರ ಆಟದಲ್ಲಿ ಇಂತಹ ಹಣಕಾಸಿನ ಏರುಪೇರು ಸಾಮಾನ್ಯ. ಸೌದಿಯ ರಸ್ತೆಯಲ್ಲಿ ಓಡಾಡಿದ ಅನುಭವಿರುವ ನನಗೆ ಕತಾರ್ ಗಲ್ಲಿಗಳಲ್ಲಿ ಸುತ್ತುವ ಅವಕಾಶ ಕೂಡ ಸಿಕ್ಕಿತ್ತು. ಅರಬ್ ದೇಶಗಳಲ್ಲಿ ಸೌದಿ ನಂತರ ಅತಿ ಹೆಚ್ಚು ಸುನ್ನಿ ಮುಸ್ಲಿಮರನ್ನ ಹೊಂದಿರುವ ದೇಶ ಕತಾರ್ ಆದರೆ ಸೌದಿಯಲ್ಲಿ ನೆಡೆದಾಡುವಾಗ ಆಗುವ ಅಸ್ಥಿರತೆ ಕತಾರ್ ನಲ್ಲಿ ಆಗುವುದಿಲ್ಲ.
ಖತಾರ್ ಜನ ಸ್ನೇಹ ಪ್ರಿಯರು. ಸೌದಿ ಮುಸ್ಲಿಮರಂತೆ ಅಹಂಕಾರಿಗಳಲ್ಲ. ಕತಾರ್ ಶಿಯಾ ಮುಸ್ಲಿಂ ಮೆಜಾರಿಟಿ ಇರುವ ಇರಾನ್ ನೊಂದಿಗಿನ ಈ ಸ್ನೇಹಪರತೆಯೇ ಅವರಿಗೆ ಮುಳುವಾಗಲಿದೆಯೇ? ಕಾಲ ಉತ್ತರ ಹೇಳಬೇಕು. ಒಂದಂತೂ ಸತ್ಯ ಕತಾರ್ ಭಯೋದ್ಪಾದನೆಗೆ ಕುಮ್ಮುಕ್ಕು ಕೊಟ್ಟಿದೆ ಎನ್ನುವ ನೆವ ಹೇಳಿ ಅವರ ಮೇಲೆ ಬಹಿಷ್ಕಾರ ಹಾಕಿರುವುದು ಮಾತ್ರ ದುಡ್ಡಿನ ಮುಂದೆ ಯಾವ ಭೂತಪ್ಪನು ಇಲ್ಲ ಎನ್ನುವ ಮಾತು ನೆನಪಿಗೆ ತರುತ್ತದೆ. ದುಡ್ಡಿನ ಮುಂದೆ ಯಾವ ಧರ್ಮ? ಯಾವ ಅಣ್ಣ? ಯಾವ ತಮ್ಮ? ಯಾವ ಸಂಬಂಧ? ಇದೇನೇ ಇರಲಿ ತನ್ನ ಬಲದಿಂದ ಮೇಲೆದ್ದ ಕತಾರ್ ಗೆ ಇರಾಕ್ ಸ್ಥಿತಿ ಬರದಿರಲಿ. ಸುಖಾಸುಮ್ಮನೆ ದೊಡ್ಡವರಾಟಕ್ಕೆ ಸಾಮಾನ್ಯ ಪ್ರಜೆ ಬಲಿಯಾಗದಿರಲಿ.