ನವದೆಹಲಿ: ಇದೇ ಜುಲೈ 1ರಿಂದ ಜಾರಿಗೆ ಬರುವಂತೆ ತೆರಿಗೆ ಪಾವತಿದಾರರ ಪ್ಯಾನ್ ಕಾರ್ಡ್‍ಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಜೋಡಣೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಆದಾಯ ತೆರಿಗೆ ನಿಯಮಾವಳಿಗಳಿಗೆ ಮಾಡಲಾದ ತಿದ್ದುಪಡಿಗಳ ಬಗ್ಗೆ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದ್ದು, ಪ್ಯಾನ್(ಪರ್ಮೆನೆಂಟ್ ಅಕೌಂಟ್ ನಂಬರ್)ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ 12 ಅಂಕಿಗಳ ಬಯೋಮೆಟ್ರಿಕ್ ಆಧಾರ್ ಕಾರ್ಡ್ ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಣಕಾಸು ಮಸೂದೆ 2017-18ರಲ್ಲಿ ತೆರಿಗೆ ಪ್ರಸ್ತಾವನೆಗಳಿಗೆ ತಿದ್ದುಪಡಿ ಮೂಲಕ ಹಣಕಾಸು ಸಚಿವ ಅರುಣ್ ಜೇಟ್ಲಿ ಆದಾಯ ತೆರಿಗೆ ಮರುಪಾವತಿ ಮಾಡುವ ವೇಳೆ ಆಧಾರ್ ಕಡ್ಡಾಯಗೊಳಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಗಳನ್ನು ಹೊಂದುವ ಮೂಲಕ ತೆರಿಗೆ ವಂಚನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ತೆರಿಗೆ ವಂಚನೆ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಣಯ ಕೈಗೊಂಡಿತ್ತು.
ಸರ್ಕಾರಿ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಲಿಂಕ್ ಮಾಡುವ ಸಂಬಂಧ ಸೂಚನೆ ಹೊರಡಿಸಿದಾಗಿನಿಂದಲೂ ಈ ವರೆಗೂ ಸುಮಾರು 2.07 ಕೋಟಿ ತೆರಿಗೆ ಪಾವತಿದಾರರು ಆಧಾರ್-ಪ್ಯಾನ್ ಜೋಡಣೆ ಮಾಡಿದ್ದಾರೆ. ಇನ್ನೂ ಸುಮಾರು 25 ಕೋಟಿ ಪ್ಯಾನ್ ಕಾರ್ಡ್ ಹೊಂದಿರುವವರು ಇದ್ದು, 111 ಕೋಟಿ ಜನರಿಗೆ ಆಧಾರ್ ಕಾರ್ಡ್ ವಿತರಣೆ ಮಾಡಲಾಗಿದೆ.