ವಾಣಿಜ್ಯ

ಏರ್ ಇಂಡಿಯಾ ಷೇರು ಖರೀದಿಗೆ ಇಂಡಿಗೋ ಏರ್ ಲೈನ್ಸ್ ಆಸಕ್ತಿ: ವರದಿ

Lingaraj Badiger
ನವದೆಹಲಿ: ನಷ್ಟದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾವನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ, ದೇಶದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್ ಲೈನ್ಸ್ ಏರ್ ಇಂಡಿಯಾದ ಷೇರು ಖರೀದಿ ಬಗ್ಗೆ ಆಸಕ್ತಿ ತೋರಿದೆ ಎಂದು ಸಿಎನ್ ಬಿಸಿ ಟಿವಿ18 ಗುರುವಾರ ವರದಿ ಮಾಡಿದೆ.
ನಿನ್ನೆಯಷ್ಟೇ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಏರ್‌ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಈಗ ಇಂಟರ್ ಗ್ಲೋಬ್ ವಿಮಾನಯಾನ ಸಂಸ್ಥೆಯ ಇಂಡಿಗೋ ಏರ್ ಇಂಡಿಯಾ ಷೇರು ಖರೀದಿ ಬಗ್ಗೆ ಆಸಕ್ತಿ ತೋರಿದೆ ಎಂದು ವಿಮಾನಯಾನ ಸಚಿವಾಲ ಹೇಳಿರುವುದಾಗಿ ವರದಿ ತಿಳಿಸಿದೆ.  
ಸದ್ಯ ಏರ್‌ ಇಂಡಿಯಾ 52 ಸಾವಿರ ಕೋಟಿ ರು. ನಷ್ಟದಲ್ಲಿದ್ದು, ಕೇಂದ್ರ ಸರ್ಕಾರ ಕೂಡಲೇ ಬಂಡವಾಳ ಹಿಂತೆಗೆಯಬೇಕು ಮತ್ತು ಈ ಹಣವನ್ನು ಇತರ ವಲಯಗಳಿಗೆ ವಿನಿಯೋಗಿಸಬೇಕು ಎಂದು ನೀತಿ ಆಯೋಗ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏರ್ ಇಂಡಿಯಾ ಖಾಸಗೀಕರಣಕ್ಕೆ ಚಾಲನೆ ನೀಡಿದೆ.
SCROLL FOR NEXT