ವಾಣಿಜ್ಯ

ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣದಲ್ಲಿ ಭಾರೀ ಇಳಿಕೆ

Sumana Upadhyaya
ಜೂರಿಚ್/ನವದೆಹಲಿ: ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಬಗ್ಗೆ ಮಾಹಿತಿಗಳು ಹೊರಬೀಳುತ್ತಿದ್ದಂತೆ ಅಲ್ಲಿನ ಬ್ಯಾಂಕುಗಳಲ್ಲಿ ಇಟ್ಟಿರುವ ಹಣದ ಪ್ರಮಾಣ 2016ರಲ್ಲಿ ಶೇಕಡಾ 45ರಷ್ಟು ಕಡಿಮೆಯಾಗಿದೆ. 2015ರಲ್ಲಿ ಭಾರತೀಯರು 8,392 ಕೋಟಿ ರೂಪಾಯಿಗಳನ್ನು ಸ್ವಿಸ್ ಬ್ಯಾಂಕುಗಳಲ್ಲಿಟ್ಟಿದ್ದರು. ಅದು 2016ರಲ್ಲಿ 4,500 ಕೋಟಿ ರೂಪಾಯಿಗೆ ಇಳಿದಿದೆ. 
ಹತ್ತು ವರ್ಷಗಳ ಹಿಂದೆ ಅಂದರೆ 2006ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತದ ಕಾಳಧನಿಕರು ಇಟ್ಟಿದ್ದ ಹಣದ ಪ್ರಮಾಣ ಗರಿಷ್ಠ 23,000 ಕೋಟಿ ರೂಪಾಯಿಗಳಷ್ಟಿತ್ತು. 1987ರಿಂದ ಸಿಕ್ಕಿರುವ ದಾಖಲೆಗಳ ಪ್ರಕಾರ ಕಳೆದ ವರ್ಷದವರೆಗೆ ಭಾರತೀಯರು ಇಟ್ಟಿದ್ದ ಹಣದಲ್ಲಿ 1995ರಲ್ಲಿ ಅತಿ ಕಡಿಮೆ 4,844 ಕೋಟಿ ರೂಪಾಯಿಗಳನ್ನು ಇಟ್ಟಿದ್ದರು.
ಇದೀಗ ಸ್ವಿಸ್ ಬ್ಯಾಂಕಿನಲ್ಲಿ ಹಣ ಇಟ್ಟವರ ಹೆಸರನ್ನು ಸ್ವಿಜರ್ಲ್ಯಾಂಡ್ ಸರ್ಕಾರ ಬಹಿರಂಗಪಡಿಸುತ್ತಿರುವುದು ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮದಿಂದಾಗಿ ಕಪ್ಪು ಹಣದ ಪ್ರಮಾಣ ಇಳಿಕೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಭಾರತ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಭಾರತೀಯರು ಸ್ವಿಜರ್ಲ್ಯಾಂಡ್ ನಂತಹ ದೇಶಗಳಲ್ಲಿ ಇಟ್ಟಿರುವ ಕಪ್ಪು ಹಣದ ಕುರಿತು ತನಿಖೆ ನಡೆಸಲಿದೆ. 
ಇನ್ನು ಸ್ವಿಸ್ ಬ್ಯಾಂಕುಗಳಲ್ಲಿ ಬೇರೆ ದೇಶದವರು ಇಟ್ಟಿರುವ ಹಣದ ಪ್ರಮಾಣ 2016ರಲ್ಲಿ 94 ಲಕ್ಷ ಕೋಟಿ ರೂಪಾಯಿಗಳಿಂದ 96 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಸ್ವಿಸ್ ಬ್ಯಾಂಕುಗಳಿಗೆ ಇಳಿಕೆಯಾದ ಲಾಭ: ಭಾರತ ಹಾಗೂ ಬೇರೆ ದೇಶಗಳ ಕಪ್ಪುಹಣ ಮತ್ತು ಕಾಳಧನಿಕರಿಗೆ ತಮ್ಮ ಅಕ್ರಮ ಹಣವನ್ನಿಡಲು ಸ್ವಿಜರ್ಲ್ಯಾಂಡಿನ ಬ್ಯಾಂಕು ಸ್ವರ್ಗವೆನಿಸುತ್ತಿತ್ತು. ಆದರೆ ಇತ್ತೀಚೆಗೆ ಒತ್ತಡ ಮತ್ತು ಕಟ್ಟುನಿಟ್ಟಿನ ಕ್ರಮದಿಂದಾಗಿ ಅಲ್ಲಿನ ಬ್ಯಾಂಕುಗಳ ಲಾಭ ಅರ್ಧಕರ್ಧ ಇಳಿದಿದೆ. 2016ರಲ್ಲಿ ಸ್ವಿಜರ್ಲ್ಯಾಂಡ್ ಬ್ಯಾಂಕುಗಳು 1.06 ಲಕ್ಷ  ಕೋಟಿ ರೂಪಾಯಿ ಲಾಭ ಗಳಿಸಿದ್ದರೆ, ಪ್ರಸ್ತುತ ಅದರ ಲಾಭ ಅರ್ಧದಷ್ಟಾಗಿದೆ. ಈ ಮಧ್ಯೆ ಅಲ್ಲಿನ ಬ್ಯಾಂಕುಗಳ ಸಂಖ್ಯೆ ಕೂಡ 266ರಿಂದ 261ಕ್ಕೆ ಇಳಿದಿದೆ. ಸಿಬ್ಬಂದಿ ಕಡಿತವಾಗಿದೆ. ಒಟ್ಟಾರೆ ಲಾಭದಲ್ಲಿ ಕುಸಿತವಾದರೆ ಠೇವಣಿಯಲ್ಲಿ ಏರಿಕೆಯಾಗಿದೆ. 261 ಬ್ಯಾಂಕುಗಳಲ್ಲಿ 226 ಬ್ಯಾಂಕುಗಳು ಲಾಭ ಗಳಿಸಿವೆ.
SCROLL FOR NEXT