ವಾಣಿಜ್ಯ

ಬ್ಯಾಂಕ್ ಗ್ರಾಹಕರಿಗೆ ಹೊಸ ಶಾಕ್: ಇನ್ಮುಂದೆ ತಿಂಗಳಿಗೆ 4 ಬಾರಿ ಮಾತ್ರ ಉಚಿತ ಹಣ ವಹಿವಾಟು

Manjula VN
ನವದೆಹಲಿ: ಗ್ರಾಹಕರಿಗೆ ಬ್ಯಾಂಕ್ ಗಳು ಹೊಸದೊಂದು ಶಾಕ್ ನೀಡಿದ್ದು, ಇನ್ನು ಮುಂದೆ ತಿಂಗಳಿಗೆ 4 ಬಾರಿ ಮಾತ್ರ ಉಚಿತವಾಗಿ ಹಣ ವಿನಿಮಯ ಹಾಗೂ ಎಟಿಎಂಗಳಿಂದ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವನ್ನು ನೀಡಿದೆ. 
ನಗದು ರಹತ ವಹಿವಾಟು ವ್ಯವಸ್ಥೆ ಜಾರಿಯ ಕೇಂದ್ರ ಸರ್ಕಾರದ ಆಂದೋಲನಕ್ಕೆ ಸಾಥ್ ನೀಡಿರುವ ಕೆಲ ಖಾಸಗಿ ಬ್ಯಾಂಕ್ ಗಳು, ತಿಂಗಳಿಗೆ 4 ನಗದು ವ್ಯವಹಾರ ಮಾತ್ರವೇ ಉಚಿತವಾಗಿರಲಿದೆ ಎಂದು ಪ್ರಕಟಿಸಿವೆ.  ಇದರ ಜತೆಗೆ ಬ್ಯಾಂಕ್ ನಿಂದ ನಗದು ಹಣ ವಿನಿಮಯದ ಮೇಲೂ ಕೆಲ ನಿರ್ಬಂಧಗಳನ್ನು ಹೇರಿದ್ದು, 5ನೇ ನಗದು ವಹಿವಾಟಿನ ಮೇಲೆ ಖಾಸಗಿ ಬ್ಯಾಂಕ್ ಗಳು ರೂ.150 ಶುಲ್ಕವನ್ನು ವಿಧಿಸಲಿವೆ. ಆದರೆ, ಎಟಿಎಂಗಳಲ್ಲಿ ಮಾತ್ರ ಈ ಹಿಂದಿನಂತೆಯೇ ಮಾಸಿಕ 5ರ ಉಚಿತ ವಹಿವಾಟು (ಮಹಾನಗರಗಳಲ್ಲಿ ಇತರೆ ಬ್ಯಾಂಕ್ ಎಟಿಎಂ ಬಳಸಿದರೆ 3ಮಾತ್ರ ಉಚಿತ) ಮಿತಿ ಮುಂದುವರೆಯಲಿದೆ. 
ಮೊದಲ ಹಂತದಲ್ಲಿ ಕೆಲವು ಖಾಸಗಿ ಬ್ಯಾಂಕ್ ಗಳು ಈ ನೀತಿಯನ್ನು ಜಾರಿಗೊಳಿಸಿದ್ದು, ಶೀಘ್ರವೇ ಸರ್ಕಾರಿ ವಲಯದ ಬ್ಯಾಂಕ್ ಗಳೂ ಕೂಡ ಇದೇ ನೀತಿಯನ್ನು ಪಾಲಿಸಲಿವೆ ಎಂದು ಮೂಲಗಳು ತಿಳಿಸಿವೆ. 
ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಖಾಸಗಿ ವಲಯದ ಹೆಚ್'ಡಿಎಫ್'ಸಿ, ಎಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಗಳು ಮಾರ್ಚ್ 1 ರಿಂದಲೇ ಜಾರಿಗೆ ಬರುವಂತೆ ನಗದು ವ್ಯವಹಾರದ ಮೇಲೆ ಹೊಸ ನಿಯಮವನ್ನು ಹೇರಿದೆ. ಅಂದರೆ, ಗ್ರಾಹಕರು ಇನ್ನು ಮುಂದೆ ತಿಂಗಳೊಂದರಲ್ಲಿ ಬ್ಯಾಂಕ್ ನಲ್ಲಿ ಗರಿಷ್ಠ 4 ಬಾರಿ ಮಾತ್ರ ನಗರು ವ್ಯವಹಾರ (ಹಣ ಜಮಾವಣೆ ಅಥವಾ ಹಿಂಪಡೆತ) ನಡೆಸಬಹುದಾಗಿದೆ. ಇದರ ನಂತರದ ಅಂದರೆ 5ನೇ ವಹಿವಾಟಿಗೆ ರೂ.150 ದಂಡವನ್ನು ಬ್ಯಾಂಕ್ ವಿಧಿಸಲಿವೆ. 
ಈ ನಿಯಮ ಉಳಿತಾಯ ಮತ್ತು ವೇತನ ಖಾತೆಗಳಿಗೂ ಅನ್ವಯವಾಗಲಿದೆ. ಇದಲ್ಲದೇ ಮೂರನೇ ವ್ಯಕ್ತಿಯೊಂದಿಗೆ ನಡೆಸುವ ನಗದು ವ್ಯವಹಾರಕ್ಕೆ ದಿನವೊಂದಕ್ಕೆ ಗರಿಷ್ಠ ರೂ.25000ದ ಮಿತಿ ಹಾಕಲಾಗಿದೆ. ಇನ್ನು ಐಸಿಐಸಿಐ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಹೋರ್ ಬ್ರ್ಯಾಂಚ್ ನಲ್ಲಿ ಮೊದಲ ನಾಲ್ಕು ನಗದು ವಹಿವಾಟು ಉಚಿತವಾಗಿರಲಿದ್ದು, ನಂತರದ ಪ್ರತಿ ರೂ.1000 ವಹಿವಾಟಿಗೆ ರೂ.5 ರಂತೆ ಕನಿಷ್ಟ ರೂ.150 ದಂಡವನ್ನು ವಿಧಿಸಲಾಗುತ್ತದೆ. ಆದರೆ, ಬೇರೆ ಶಾಖೆಗಳಲ್ಲಿ ಮೊದಲ ವಹಿವಾಟು ಮಾತ್ರವೇ ಉಚಿತವಾಗಿರಲಿದೆ. 
SCROLL FOR NEXT