ನವದೆಹಲಿ: 500 ಹಾಗೂ 1000 ರುಪಾಯಿ ನೋಟ್ ನಿಷೇಧದ ನಂತರ ಆರ್ ಬಿಐ ಬಿಡುಗಡೆ ಮಾಡಿರುವ ಹೊಸ 2,000 ರುಪಾಯಿ ನೋಟ್ ಅನ್ನು ಹಿಂಪಡೆಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ನವೆಂಬರ್ 9, 2016ರಿಂದ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ, ಡಿಸೆಂಬರ್ 10, 2016ರರವರೆಗೆ ಆರ್ ಬಿಐಗೆ ಒಟ್ಟು 12.44 ಲಕ್ಷ ಕೋಟಿ ರುಪಾಯಿ ಮೌಲ್ಯದ ನಿಷೇಧಿತ ನೋಟ್ ಗಳು ಜಮೆಯಾಗಿವೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಜನವರಿ 27ರವರೆಗೆ ಒಟ್ಟು 9.921 ಲಕ್ಷ ಕೋಟಿ ಹಾಗೂ ಮಾರ್ಚ್ 3ರರವರೆಗೆ ಒಟ್ಟು 12 ಲಕ್ಷ ಕೋಟಿ ರುಪಾಯಿ ಮೌಲ್ಯದ ಹೊಸ 500 ಹಾಗೂ 2000 ರುಪಾಯಿ ನೋಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭ್ರಷ್ಟಾಚಾರ, ಕಪ್ಪು ಹಣ, ನಕಲಿ ನೋಟ್ ಹಾಗೂ ಭಯೋತ್ಪಾದನೆಗೆ ಧನ ಸಹಾಯ ನಿಲ್ಲಿಸಲು ಕೇಂದ್ರ ಸರ್ಕಾರ ಗರಿಷ್ಠ ಮೌಲ್ಯದ ನೋಟ್ ಗಳನ್ನು ನಿಷೇಧಿಸಲಾಗಿದ್ದು, ಸರ್ಕಾರದ ಈ ಕ್ರಮದಿಂದಾಗಿ ಬ್ಯಾಂಕ್ ಡೆಪೊಸಿಟ್ ಹೆಚ್ಚಾಗಿದೆ ಎಂದು ಜೇಟ್ಲಿ ವಿವರಿಸಿದ್ದಾರೆ.