ನವದೆಹಲಿ: ಹೆಚ್ಚುತ್ತಿರುವ ಮಾರುಕಟ್ಟೆ ಸ್ಪರ್ಧೆ ಮತ್ತು ತಮ್ಮ ಗ್ರಾಹಕ ಜಾಲವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ಹೊಸ ಹೊಸ ಘೋಷಣೆಗಳನ್ನು ಮಾಡುತ್ತಿದ್ದು, ಇದೀಗ ತಾನು ಈ ಹಿಂದೆ ಘೋಷಣೆ ಮಾಡಿದ್ದ 99 ರು.ಗಳ ಜಿಯೋ ಪ್ರೈಮ್ ಮೆಂಬರ್ ಷಿಪ್ ಅನ್ನು ಉಚಿತವಾಗಿ ನೀಡಲು ಮುಂದಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ ಮುಖೇಶ್ ಅಂಬಾನಿ ಅವರು ಜಿಯೋ ಗೆ ಅತ್ಯಧಿಕ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಹಾಗೂ ಈಗಿರುವ ಬಳಕೆದಾರರನ್ನು ಜಿಯೋ ಜಾಲದಲ್ಲಿ ಸುದೀರ್ಘ ಕಾಲ ಉಳಿಸಿಕೊಳ್ಳುವ ಸಲುವಾಗಿ ಹೊಸ ಕೊಡುಗೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಜಿಯೋ ಪ್ರೈಮ್ ಮೆಂಬರ್ ಶಿಪ್ ಪಡೆಯಲು ಪಾವತಿಸಬೇಕಾಗಿರುವ 99 ರು.ಗಳನ್ನು ರಿಲಯನ್ಸ್ ಜಿಯೋದಲ್ಲಿನ ಜಿಯೊ ಮನಿ ಆ್ಯಪ್ ಮೂಲಕ ಪಾವತಿಸಿದರೆ 50 ರು. ಕ್ಯಾಶ್ ಬ್ಯಾಕ್ ಆಫರ್ ಪಡೆಯಬಹುದು. ಅದೇ ರೀತಿ ತಿಂಗಳ ರೀಚಾರ್ಜ್ 303 ರು.ದರವನ್ನು ಜಿಯೋ ಮನಿ ಆ್ಯಪ್ ಮೂಲಕ ಪಾವತಿಸಿದರೆ ಪುನಃ 50 ರೂ.ಗಳ ಕ್ಯಾಶ್ ಬ್ಯಾಕ್ ಆಫರ್ ಸಿಗಲಿದೆ ಎಂದು ಜಿಯೋ ಮೂಲಗಳು ತಿಳಿಸಿವೆ.
ಆ ಮೂಲಕ ಮೆಂಬರ್ ಶಿಪ್ ಶುಲ್ಕದಲ್ಲಿನ 50 ರು ಮತ್ತು ರೀಚಾರ್ಜ್ ನಲ್ಲಿನ 50 ರು. ಶುಲ್ಕ ಮತ್ತೆ ಗ್ರಾಹಕರ ಕಿಸೆಗೆ ವಾಪಸಾಗಲಿದೆ. ಅಂದರೆ ಮೆಂಬರ್ ಷಿಪ್ ಗೆ ಗ್ರಾಹಕರು ಪಾವತಿಸುವ ಹಣ ಈ ರೀತಿಯಾಗಿ ವಾಪಸ್ ಆಗಿ ಮೆಂಬರ್ ಷಿಪ್ ಉಚಿತವಾದಂತಾಗುತ್ತದೆ.
ಇದೇ ಮಾರ್ಚ್ 31ರಿಂದ ಜಿಯೋದ ಹಲವು ಉಚಿತ ಕೊಡುಗೆಗಳ ಕಾಲಾವಧಿ ಮುಕ್ತಾಯವಾಗಲಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಜಿಯೋ ತನ್ನ ಹೊಸ ಸೇವಾ ಕೊಡುಗೆಗಳನ್ನು ಈ ಹಿಂದೆಯೇ ಪ್ರಕಟಿಸಿತ್ತು. ಅದರಂತೆ 99 ರು.ಗಳನ್ನು ಪಾವತಿಸಿ ಜಿಯೋ ಪ್ರೈಮ್ ಮೆಂಬರ್‌ಶಿಪ್ ಪಡೆಯುವ ಮೂಲಕ ಮತ್ತು ತಿಂಗಳಿಗೆ 303 ರು.ಗಳ ರೀಚಾರ್ಜ್ ಶುಲ್ಕ ಪಾವತಿಸುವ ಮೂಲಕ ಅನಿಯಮಿತ ಡಾಟಾ ಮತ್ತು ಕಾಲಿಂಗ್ ಸೇವೆಯನ್ನು ಪಡೆಯಬಹುದಿತ್ತು.
ಅಂತೆಯೇ ರಿಲಯನ್ಸ್ ಜಿಯೋ ಕಳೆದ ಮಾರ್ಚ್ 1ರಿಂದ ಜಿಯೋ ಪ್ರೈಮ್ ಮೆಂಬರ್ ಶಿಪ್ ಯೋಜನೆಯನ್ನು ಪ್ರಕಟಿಸಿತ್ತು. ಇದಕ್ಕೆ ಸೇರಬಯಸುವ ಗ್ರಾಹಕರು 99 ರು.ಗಳನ್ನು ಪಾವತಿಸಬೇಕಾಗಿತ್ತು. ಅಲ್ಲದೇ ತಿಂಗಳಿಗೆ 303 ರು. ರೀಚಾರ್ಜ್ ದರ ನೀಡಿ ರಿಲಯನ್ಸ್ ನ 4ಜಿ "ಹ್ಯಾಪಿ ನ್ಯೂ ಇಯರ್ ಕೊಡುಗೆ"ಯನ್ನು ಮಾರ್ಚ್ 31ರ ಬಳಿಕವೂ ಪೂರ್ತಿಯಾಗಿ ಅನುಭವಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.